2050 ರ ವೇಳೆಗೆ ಹೆಚ್ಚಾಗಲಿದೆಯಂತೆ ಶ್ರವಣ ಸಮಸ್ಯೆ,WHO ವರದಿಯಲ್ಲೇನಿದೆ?

ವರದಿಯ ಏನ್ ಹೇಳುತ್ತೆ?

  • ಇಂದಿನ ಪರಿಸ್ಥಿತಿಯಲ್ಲಿ ವಿಶ್ವದ ಪ್ರತಿ ಐದು ಜನರಲ್ಲಿ ಒಬ್ಬರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ.
  • ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಆರೈಕೆಯ ಕೊರತೆ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ.
  • ಶ್ರವಣ ದೋಷದ ಸುಮಾರು 80% ಪ್ರಕರಣಗಳು ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲಿ ತಜ್ಞರು ಮತ್ತು ಅಗತ್ಯ ಸೌಲಭ್ಯಗಳ ಕೊರತೆ ತೀವ್ರವಾಗಿದೆ.
  • ಸೋಂಕುಗಳು, ಜನ್ಮಜಾತ ವೈಕಲ್ಯಗಳು, ಶಬ್ದ ಮಾಲಿನ್ಯ, ಜೋರಾದ ಶಬ್ದಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು ಹಾಗೂ ಅಸ್ವಸ್ಥ ಜೀವನಶೈಲಿ ಪ್ರಮುಖ ಕಾರಣಗಳಾಗಿವೆ.

ಮಕ್ಕಳಲ್ಲಿ ತಡೆಗಟ್ಟುವಿಕೆ ಸಾಧ್ಯವೇ?

ಮಕ್ಕಳಲ್ಲಿ ಕಂಡುಬರುವ ಶ್ರವಣ ಸಮಸ್ಯೆಗಳ ಸುಮಾರು 60% ಪ್ರಕರಣಗಳನ್ನು ಲಸಿಕಾಕರಣ, ತಾಯಿ-ಮಗು ಆರೈಕೆಯ ಸುಧಾರಣೆ ಹಾಗೂ ಕಿವಿ ಸೋಂಕುಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಮೂಲಕ ತಡೆಯಬಹುದು ಎಂದು ವರದಿ ಹೇಳುತ್ತದೆ.

ಯುವಕರಲ್ಲಿ ಹೆಚ್ಚುತ್ತಿದೆ ಅಪಾಯ!

12 ರಿಂದ 35 ವರ್ಷದವರಲ್ಲಿ ಜೋರಾಗಿ ಸಂಗೀತ ಕೇಳುವ ಪ್ರವೃತ್ತಿ ಹೆಚ್ಚುತ್ತಿದೆ. 10 ಕೋಟಿಗೂ ಹೆಚ್ಚು ಯುವಕರು ಸ್ಮಾರ್ಟ್‌ಫೋನ್ ಮತ್ತು ಹೆಡ್ಫೋನ್ ಮೂಲಕ ಜೋರಾದ ಧ್ವನಿಯಲ್ಲಿ ಸಂಗೀತ ಕೇಳುವುದರಿಂದ ಶ್ರವಣ ಹಾನಿಯ ಅಪಾಯದಲ್ಲಿದ್ದಾರೆ.

ಬಹುತೇಕ ದೇಶಗಳಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞರು, ಆಡಿಯಾಲಜಿಸ್ಟ್‌ಗಳು ಹಾಗೂ ಸ್ಪೀಚ್ ಥೆರಪಿಸ್ಟ್‌ಗಳ ಕೊರತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಿವಿ ಮತ್ತು ಶ್ರವಣ ಆರೈಕೆಗೆ ಬೇಕಾದ ಸಂಪನ್ಮೂಲಗಳ ಅಭಾವದಿಂದ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ವಿಳಂಬವಾಗುತ್ತಿದೆ. ತಜ್ಞರ ಪ್ರಕಾರ, ಆರಂಭದಲ್ಲೇ ಪತ್ತೆಹಚ್ಚುವುದು ಅತ್ಯಂತ ಮುಖ್ಯ.

ಪರಿಹಾರ ಏನು?

ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಕಡಿಮೆ ಸಂಪನ್ಮೂಲಗಳಿದ್ದರೂ ಸಹ ರೋಗನಿರ್ಣಯ ಸಾಧ್ಯವಾಗಿದೆ. ಕೆಲವು ಕಿವಿ ಸಮಸ್ಯೆಗಳನ್ನು ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದು. ಶ್ರವಣ ನಷ್ಟವನ್ನು ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಾಗದಿದ್ದರೆ, ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್‌ಗಳು ಮತ್ತು ಸ್ಪೀಚ್ ಥೆರಪಿ ಪರಿಣಾಮಕಾರಿ ಆಯ್ಕೆಯಾಗಿವೆ.