ಕುಂದಾಪುರ: ನವೆಂಬರ್ 8 ರಂದು ನಾಪತ್ತೆಯಾಗಿದ್ದ ದಂತವೈದ್ಯರೊಬ್ಬರ ಮೃತದೇಹವು ಕುಂದಾಪುರ ಸಮೀಪದ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಕಾಸರಗೋಡಿನ ಕುಂಬಳೆ ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣ ಮೂರ್ತಿ (57) ನವೆಂಬರ್ 8 ರಂದು ನಾಪತ್ತೆಯಾಗಿದ್ದು, ಇದೀಗ ಕುಂದಾಪುರದ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಎಂಬಲ್ಲಿಯ ರೈಲ್ವೆ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ದೊರೆತ ಕೂಡಲೇ ಕೃಷ್ಣ ಮೂರ್ತಿಯವರ ಕುಟುಂಬಿಕರು ಕುಂದಾಪುರಕ್ಕೆ ತೆರಳಿ ಮೃತ ದೇಹದ ಗುರುತು ಪತ್ತೆ ಹಚ್ಚಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಶುಕ್ರವಾರದಂದು ಊರಿಗೆ ತರಲಾಗುವುದು ಎನ್ನಲಾಗಿದೆ.
ನವೆಂಬರ್ 8 ಮಧ್ಯಾಹ್ನದ ಬಳಿಕ ವೈದ್ಯರು ಬದಿಯಡ್ಕದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವೈದ್ಯರ ಬೈಕ್ ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿತ್ತು. ತಮ್ಮ ಮೊಬೈಲ್ ಅನ್ನು ಕ್ಲಿನಿಕ್‌ನಲ್ಲೇ ಬಿಟ್ಟು ತೆರಳಿದ್ದರು. ನಾಪತ್ತೆ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಿಗೆ ಮಾಹಿತಿರವಾನಿಸಿದ್ದರು. ಕಾಸರಗೋಡು ದಂತ ವೈದ್ಯರ ಸಂಘಟನೆಯ ನೇತೃತ್ವದಲ್ಲಿ ಕೃಷ್ಣ ಮೂರ್ತಿಯವರನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿ ಗುರುವಾರದಂದು ಬದಿಯಡ್ಕದಲ್ಲಿ ಧರಣಿ ಕೂಡಾ ನಡೆದಿತ್ತು.
ಇದೀಗ ವೈದ್ಯರ ಮೃತ ದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.