ಇ-ಕಾಮರ್ಸ್ ಡೆಲಿವರಿ ವಂಚನೆ: ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಗಳ ಬದಲಿಗೆ ಬರುತ್ತಿವೆ ಡಿಟರ್ಜೆಂಟ್ ಸೋಪುಗಳು!

ಮುಂಬೈ: ದೇಶದಲ್ಲಿ ಹಬ್ಬದ ವಾತಾವರವಿದ್ದು, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಂತಹ ಇ ಕಾಮರ್ಸ್ ಕಂಪನಿಗಳು ಎಲ್ಲಾ ಉತನ್ನಗಳನ್ನು ರಿಯಾಯತಿ ದರದಲ್ಲಿ ಮಾರುತ್ತಿದ್ದು, ಈ ಕಂಪನಿಗಳ ಮೂಲಕ ಉತ್ಪನ್ನಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ಉತ್ಪನ್ನಗಳ ಬದಲಿಗೆ ಡಿಟರ್ಜೆಂಟ್ ಸೂಪುಗಳು, ಕಲ್ಲು, ಬಟಾಟೆ ಮುಂತಾದ ವಸ್ತುಗಳು ಪೂರೈಕೆಯಾಗುತ್ತಿವೆ ಎಂದು ಮಾಧ್ಯಮ ವರದಿಗಳಾಗಿವೆ.

ಮುಂಬೈನ ಸಯನ್ ನಿವಾಸಿಯೊಬ್ಬರು ಇತ್ತೀಚೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ರೂ 54,999 ಮೌಲ್ಯದ ವನ್ ಪ್ಲಸ್ 10ಟಿ 5ಜಿ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಅವರು ಡೆಲಿವರಿಯನ್ನು ಸ್ವೀಕರಿಸಿ ಪೊಟ್ಟಣವನ್ನು ತೆರೆದು ನೋಡಿದಾಗ ಅಲ್ಲಿ ಪಾತ್ರೆ ತೊಳೆಯುವ ಸೋಪು ಕಂಡು ದಂಗಾಗಿದ್ದಾರೆ. ಗ್ರೇಟ್ ಇಂಡಿಯನ್ ಸೇಲ್‌ನ ಮೊದಲ ದಿನದಂದು ವನ್ ಪ್ಲಸ್ ಫೋನ್ ಅನ್ನು ಆರ್ಡರ್ ಮಾಡಿದ್ದು, ಅದೆ ದಿನ ಸಂಜೆ ಡೆಲಿವರಿ ಪಡೆದಿದ್ದರು. ಆದರೆ ಅದೇ ದಿನ ಪೊಟ್ಟಣವನ್ನು ತೆರೆಯದೆ ನವರಾತ್ರಿಯ ಮೊದಲ ದಿನವಾದ ಸೋಮವಾರ ಪೊಟ್ಟಣ ತೆರೆದು ನೋಡಿದಾಗ ಪೆಟ್ಟಿಗೆಗಳಲ್ಲಿ ಸಾಬೂನುಗಳು ಪತ್ತೆಯಾಗಿವೆ. ತಕ್ಷಣ ಅವರು ಅಮೆಜಾನ್ ಗ್ರಾಹಕ ಸೇವೆಗೆ ಮೇಲ್ ಬರೆದಿದ್ದಾರೆ ಮತ್ತು ಅಮೆಜಾನ್‌ನಿಂದ ಉತ್ತರವನ್ನು ಪಡೆದ ನಂತರ ಗ್ರಾಹಕ ಸೇವಾ ಕೇಂದ್ರಕ್ಕೂ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ. ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಗ್ರೀನ್ ಮೊಬೈಲ್ಸ್ ಅಮೆಜಾನ್‌ ಕಂಪನಿಯೊಂದಿಗೆ ಪಾಲುದಾರನಾಗಿದ್ದು, ಅಲ್ಲಿಂದ ಈ ಮೊಬೈಲ್ ಅನ್ನು ಕಳುಹಿಸಬೇಕಾಗಿದ್ದು, ಮೊಬೈಲ್ ಬದಲಿಗೆ ಸೋಪು ಡೆಲಿವರಿ ಆಗಿದೆ.

ಇದೇ ರೀತಿ ಐಐಎಂ ಅಹಮದಾಬಾದ್ ನ ವಿದ್ಯಾರ್ಥಿಯೊಬ್ಬರು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ ತನ್ನ ತಂದೆಗೆ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದಾರೆ. ಪೊಟ್ಟಣ ತೆರೆದು ನೋಡಿದಾಗ ಲ್ಯಾಪ್‌ಟಾಪ್ ಬದಲಿಗೆ ಡಿಟರ್ಜೆಂಟ್ ಬಾರ್ ಸೋಪ್ ಕಂಡು ಹೌಹಾರಿದ್ದಾರೆ. ಡೆಲಿವರಿ ಹಗರಣದ ಕಥೆಯನ್ನು ವಿವರಿಸಲು ಅವರು ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದಾರೆ.

ಇನ್ನೊಂದೆಡೆ ಬಿಹಾರದಲ್ಲಿ ಮೀಶೋ ಗ್ರಾಹಕರೊಬ್ಬರಿಗೆ ಡ್ರೋನ್ ಕ್ಯಾಮರಾ ಬದಲಿಗೆ ಬಟಾಟೆಗಳನ್ನು ಪೆಟ್ಟಿಗೆಯೊಳಗಿಟ್ಟು ಕಳುಹಿಸಿಕೊಡಲಾಗಿದೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಸಂಸ್ಥೆಯಿಂದ ಲಾಪ್ ಟಾಪ್, ಡ್ರೋನ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ಕೊಳ್ಳುತ್ತಿರುವ ಬಹುತೇಕ ಗ್ರಾಹಕರಿಗೆ ಇಂತಹ ಅನುಭವಗಳಾಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಘಟನೆಗಳ ಬಗ್ಗೆ ವರದಿಯಾಗುತ್ತಿವೆ.

ವರದಿ: ಟೈಮ್ಸ್ ನೌ, ಇಂಡಿಯಾ ಟುಡೆ