ಹಿಮಾಲಯದ ತಪ್ಪಲಿನ ಉತ್ತರಾಖಂಡದಲ್ಲಿ ಕುಸಿಯುತ್ತಿದೆ ಭೂಮಿ: ನಗರೀಕರಣದಿಂದಾಗಿ ನಲುಗಿತು ಜೀವನ

ಜೋಶಿಮಠ: ಹಿಮಾಲಯದ ತಪ್ಪಲಿನ ಈ ಪಟ್ಟಣವು ಕುಸಿಯುತ್ತಿದೆ. ಇಲ್ಲಿನ ರಸ್ತೆ, ಮನೆ, ಶಾಲೆ ಕಾಲೇಜು, ಕೃಷಿ ಭೂಮಿಯಲ್ಲಿ ಭೂಮಿ ಬಾಯ್ದೆರೆದು ದೊಡ್ಡ ವಿಕೋಪವೊಂದಕ್ಕೆ ನಾಂದಿ ಹಾಡಲು ತಯಾರಾಗಿ ನಿಂತಿದೆ.

ಇಲ್ಲಿನ 561 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುಮಾರು 66 ಕುಟುಂಬಗಳು ಈ ಜಾಗವನ್ನು ತೊರೆದು ಬೇರೆ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಸಿಂಗಧಾರ್ ಮತ್ತು ಮಾರವಾಡಿ ಎಂಬ ಸ್ಥಳಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿವೆ. ಮನೆ ಮಾತ್ರವಲ್ಲ ಇಲ್ಲಿನ ರಸ್ತೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ. ಜೋಶಿಮಠದ 9 ವಾರ್ಡುಗಳಲ್ಲಿ ಬೃಹತ್ ಪ್ರಮಾಣದ ಪರಿಣಾಮಗಳಾಗಿವೆ. ಇಲ್ಲಿನ 576 ಮನೆಗಳ 3000 ಜನರು ಇದರಿಂದ ಸಂತ್ರಸ್ತರಾಗಲಿದ್ದಾರೆ.

Joshimath's land subsidence: Over 560 houses damaged

ಸುದ್ದಿ ತಿಳಿದ ತಕ್ಷಣ ಉತ್ತರಾಖಂಡ್ ನ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ಸರಕಾರಿ ಅಧಿಕಾರಿಗಳು ತೆರಳಿ ಸರ್ವೆ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮನೆ-ಮಠ ಕಳೆದುಕೊಂಡವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.

ಜೋಶಿಮಠದಲ್ಲೇನಾಗುತ್ತಿದೆ?

ಜೋಶಿಮಠವು ಉತ್ತರಾಖಂಡದ ಜನಪ್ರಿಯ ಗಿರಿಧಾಮವಾಗಿದೆ ಮತ್ತು ಇದು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಬೆಟ್ಟದ ಬದಿಯಲ್ಲಿದೆ. ಜೋಶಿಮಠವು ಪುರಾತನ ಭೂಕುಸಿತ ಸ್ಥಳದಲ್ಲಿದೆ ಎಂದು ವರದಿಗಳು ಹೇಳುತ್ತವೆ. ಕ್ಷಿಪ್ರ ನಗರೀಕರಣದಿಂದಾಗಿ, ಈ ದುರ್ಬಲವಾದ ಹಿಮಾಲಯದ ಪಟ್ಟಣವು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿದೆ.

Uttarakhand's Joshimath sinking: Cracks in 46 more houses in a week | Dehradun News - Times of India

1976ರ ಮಿಶ್ರಾ ಸಮಿತಿಯ ವರದಿಯು ಜೋಶಿಮಠದ ಭೂಕುಸಿತದ ಬಗ್ಗೆ ಇಲ್ಲಿನ ಜನ ಮತ್ತು ಸರಕಾರಗಳನ್ನು ಎಚ್ಚರಿಸಿದ್ದರೂ, ವರದಿಯನ್ನು ಅಲಕ್ಷ್ಯ ಮಾಡಿ ಎಗ್ಗಿಲ್ಲದೆ ನಗರೀಕರಣ ಮಾಡಿರುವ ಪರಿಣಾಮವು ಇಂದು ಸಾವಿರಾರು ಜನರ ಜೀವನವನ್ನು ನಲುಗಿಸಿದೆ. ಸೇನೆ, ಐಟಿಬಿಪಿ, ಬಿಆರ್‌ಒ, ಶ್ರೀ ಕೇದಾರನಾಥ-ಬದರಿನಾಥ ದೇವಾಲಯ ಸಮಿತಿ ಮತ್ತು ಸ್ಥಳೀಯ ಆಡಳಿತದ ಸದಸ್ಯರನ್ನು ಒಳಗೊಂಡ 1976 ರ ಸಮಿತಿಯು ನೈಸರ್ಗಿಕ ಅರಣ್ಯ ಪ್ರದೇಶವನ್ನು ಕ್ಷೀಣಿಸುವುದು ಮತ್ತು ಪ್ರದೇಶದ ಬಳಿ ಕಲ್ಲುಗಳನ್ನು ಸ್ಫೋಟಿಸುವುದು ಪ್ರಾಚೀನ ಭೂಕುಸಿತ ಸ್ಥಳದಲ್ಲಿರುವ ಜೋಶಿಮಠದ ದುರ್ಬಲ ಸಮತೋಲನವನ್ನು ಅಡ್ಡಿಪಡಿಸುತ್ತದೆ ಎಂದು ಎಚ್ಚರಿಸಿತ್ತು. ಆದರೂ ಜನರಾಗಲೀ ಸರಕಾರಗಳಾಗಲೀ ಇದಕ್ಕೆ ಕಿಮ್ಮತ್ತು ಕೊಡಲಿಲ್ಲ. ಇದೀಗ ಅದರ ಪರಿಣಾಮವನ್ನು ಎಲ್ಲರೂ ಉಣ್ಣುತ್ತಿದ್ದಾರೆ.

ಗೂಗಲ್ ಅರ್ಥ್‌ನಲ್ಲಿ ಪತ್ತೆಯಾದ ಭೂಮಿಯ ಕಾಣೆಯಾದ ದಿಣ್ಣೆ ಜೋಶಿಮಠದ ಭೂಕುಸಿತ ಸಮಸ್ಯೆಯನ್ನು ವಿವರಿಸುತ್ತದೆ. ಐತಿಹಾಸಿಕವಾಗಿ ಈ ಸಮಸ್ಯೆಗಳು ನಗರೀಕರಣದಿಂದ ಉಲ್ಬಣಗೊಂಡಿವೆ ಎಂದು ಸಂಶೋಧಕರು ಹೇಳುತ್ತಾರೆ. ಏಕೆಂದರೆ ಇದು ನೈಸರ್ಗಿಕ ನೀರಿನ ಒಳಚರಂಡಿಯನ್ನು ಅಡ್ಡಿಪಡಿಸುತ್ತದೆ, ಇಳಿಜಾರುಗಳನ್ನು ಕಡಿಮೆ ಮಾಡುತ್ತದೆ ಮತ್ತು ನೀರಿನ ಅನಿಯಂತ್ರಿತ ವಿಸರ್ಜನೆಗೆ ಕಾರಣವಾಗುತ್ತದೆ.

Joshimath is sinking: This is what is happening under the ground of this Himalayan town

ಜೋಶಿಮಠದಲ್ಲಿ ಭೂಮಿಯೊಳಗಿಂದ ನೀರು ಹೊರಬರುತ್ತಿದ್ದು, ಇದು ಭೂಕುಸಿತಕ್ಕೆ ಕಾರಣವಾಗುತ್ತಿದೆ. ಸೋಮವಾರ, ಜೋಶಿಮಠದ ಬಂಡೆಗಳಿಂದ ನೀರು ಹೊರಬರಲು ಪ್ರಾರಂಭಿಸಿದಾಗ ಕುಟುಂಬಗಳು ತಮ್ಮ ಮನೆಗಳಿಂದ ಹೊರಗೋಡಿವೆ. ಹನ್ನೆರಡು ವರ್ಷಗಳ ಹಿಂದೆ ಇದೇ ಜಲಧಾರೆ ಒಡೆದು ಪಟ್ಟಣಕ್ಕೆ ನೀರು ಹರಿದಿತ್ತು. ಈ ಜಲಧಾರೆಗಳು ಭೂಗತ ನೀರಿನ ಮೂಲಗಳಾಗಿವೆ. ಜೋಶಿಮಠದಲ್ಲಿ, ಅಜಾಗರೂಕ ನಿರ್ಮಾಣವು ನೀರು ಹೊರಸೂಸುವಿಕೆಗೆ ಕಾರಣವಾಗಿದ್ದು ಇದು ಅದರ ಮೇಲಿನ ಭೂಮಿ ಕುಸಿಯಲು ಕಾರಣವಾಗಿದೆ.

ಇಲ್ಲಿನ ಅನೇಕ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಆದರೆ ರಾಜ್ಯ ಸರ್ಕಾರದಿಂದ ಶಾಶ್ವತ ಪುನರ್ವಸತಿಗೆ ಒತ್ತಾಯಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಮಾಲಯದ ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳ ನಡುವೆ ಸರ್ವ ಋತು ಸಂಪರ್ಕವನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಚಾರ್ ಧಾಮ್ ಯೋಜನೆ, ತಪೋವನ-ವಿಷ್ಣುಗಡ 520 MW ಜಲವಿದ್ಯುತ್ ಯೋಜನೆಗಾಗಿ 12 ಕಿಮೀ ಉದ್ದದ ಸುರಂಗ ಮಾರ್ಗ ಸೇರಿದಂತೆ ಈ ಪ್ರದೇಶದಲ್ಲಿ ಎಲ್ಲಾ ರೀತಿಯ ನಿರ್ಮಾಣ ಕಾರ್ಯಗಳನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಅಭಿವೃದ್ದಿ ಎನ್ನುವುದು ಪ್ರಕೃತಿಗೆ ಪೂರಕವಾಗಿದ್ದಾಗ ಮಾತ್ರ ಜನರ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಪ್ರಕೃತಿಗೆ ವಿರುದ್ದವಾಗಿ ಮಾಡುವ ಕಾರ್ಯಗಳು ಜೀವನವನ್ನು ನಲುಗಿಸುತ್ತವೆ. ಅತ್ಯಂತ ಸೂಕ್ಷ್ಮ ಪ್ರದೇಶಗಳ ವೈಜ್ಞಾನಿಕ ವರದಿಗಳನ್ನು ತಿರಸ್ಕರಿಸಿ ಅವೈಜ್ಞಾನಿಕ ನಗರೀಕರಣ ಮಾಡುತ್ತಿರುವ ಎಲ್ಲರಿಗೂ ಇದು ಎಚ್ಚರಿಕೆಯ ಘಂಟೆ.