ಮಂಗಳೂರು: ಕೊರೊನಾದಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದ 177 ಕರಾವಳಿಗರು ಇಂದು ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಏರ್ ಇಂಡಿಯಾ IX 0384 ವಿಮಾನದ ಮೂಲಕ ದುಬೈನಿಂದ ಭಾರತೀಯ ಕಾಲಮಾನ ಸಂಜೆ 4.10ಕ್ಕೆ ವಿಮಾನ ಹೊರಡಲಿದ್ದು, ರಾತ್ರಿ ಸುಮಾರು 9.10ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆ. ದುಬೈಯಿಂದ ಬರುವ 177 ಪ್ರಯಾಣಿಕರಲ್ಲಿ ಎಷ್ಟು ಮಹಿಳೆಯರು, ಪುರುಷರು ಹಾಗೂ ಗರ್ಭಿಣಿಯರು, ಆರೋಗ್ಯ ಸಮಸ್ಯೆ ಎಂಬುವುದು ದುಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಆದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
ಮಂಗಳೂರು ವಿಮಾನ ನಿಲ್ದಾಣ ತಲುಪಿದ ನಂತರ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, 17 ವಸತಿಗೃಹ, 12 ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ವಿದೇಶದಿಂದ ಬರುವವರನ್ನು A ಹಾಗೂ B ಎಂದು ಎರಡು ವಿಭಾಗ ಮಾಡಿ, ಕೆಮ್ಮು ಜ್ವರ ಇರುವವರನ್ನು A ವಿಭಾಗ ಮಾಡಿ ಅವರನ್ನು ವೆನ್ಲಾಕ್ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬಿ ವಿಭಾಗದವರನ್ನು ಹಾಸ್ಟೆಲ್, ಹೋಟೆಲ್ ನಲ್ಲಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ವಿಮಾನದಲ್ಲಿ ಕರಾವಳಿಯ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದು, ಕಾಸರಗೋಡು ಭಾಗದ ಪ್ರಯಾಣಿಕರಿಗೆ ವಿಮಾನದಲ್ಲಿ ಅವಕಾಶವಿಲ್ಲ.
ಅಲ್ಲದೇ ಏರ್ ಪೋರ್ಟ್ ಗೆ ಸಾರ್ವಜನಿಕರಿಗೆ ಮತ್ತು ಕುಟುಂಬಸ್ಥರಿಗೆ ಪ್ರವೇಶ ನಿಷೇಧ ಮಾಡಲಾಗಿದ್ದು, ಆಸ್ಪತ್ರೆ, ಹೊಟೇಲ್ ಮತ್ತು ಸರ್ಕಾರ ನಿಗದಿಪಡಿಸಿದ ಜಾಗಗಳಿಗೆ ಕ್ವಾರೆಂಟೈನ್ ಮಾಡಲು ಜಿಲ್ಲಾಡಳಿತದಿಂದಲೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ.. ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. 14 ದಿನಗಳ ವರೆಗೆ ಕ್ವಾರಂಟೈನ್ ನಡೆದು ನಂತರ ತಮ್ಮ ಮನೆಗಳಲ್ಲಿ ಕ್ವಾರಂಟೈನ್ ಮುಂದುವರಿಯಲಿದೆ.












