ಕೊರೋನ ಪೀಡಿತರನ್ನು ನೀವು ಈ ರೀತಿ ಕಾಣ್ತಿದ್ರೆ ಡಾ.ಶಶಿ ಕಿರಣ್ ಶೆಟ್ಟಿ ಹೇಳುವ ಕಿವಿಮಾತು ಕೇಳಿ!

ಕೊರೋನ ಕೊರೋನ ಕೊರೋನ. ಚೀನಾದಿಂದ ಭಾರತಕ್ಕೆ, ದೆಹಲಿಯಿಂದ ಹಳ್ಳಿಗೆ ಬಂದಾಗಿದೆ. ಇದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ಯಾರ ತಪ್ಪಿನಿಂದ, ಶಾಪದಿಂದ ಬರುವ ಕಾಯಿಲೆ ಅಲ್ಲವೇ ಅಲ್ಲ .ಇಂದು ಅವರಿಗಿದೆ, ನಾಳೆ ನಮ್ಮವರಿಗೆ, ನಾಡಿದ್ದು ನಮಗೆ !!.. ಈ ವೈರಸ್ ಕಾಯಿಲೆಯಲ್ಲಿ ಒಂದು ಸಮಾಧಾನವೆಂದರೆ ಭಾರತದಲ್ಲಿ ಅಷ್ಟೊಂದು ಮಾರಣಾಂತಿಕವಾಗಿಲ್ಲದ ಈ ಖಾಯಿಲೆಗೆ ಶೇ. 50 ಗೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ .

ಇಂದು ಹೊರ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಬರುತ್ತಿರುವ ಮಂದಿಯನ್ನು ಅವರವರ ಮನೆಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಕೊರೋನ ಪೀಡಿತರನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಅಂಥವರ ಮನೆಗಳನ್ನು ಸೀಲ್ಡೌನ್ ಮಾಡುತ್ತಿದ್ದಾರೆ. ನಿಮ್ಮ ಪಕ್ಕದ ಮನೆಯೇ ಇರಬಹುದು. ಬದಿಯ ಗಲ್ಲಿಯಲ್ಲೇ ಇರಬಹುದು ಇಂತಹ ಮನೆಗಳಿದ್ದರೆ ಇಲ್ಲಿ ನೀವು ಏನು ಮಾಡ ಬಹುದು ಎನ್ನುವುದನ್ನು ಹೇಳ್ತೇನೆ ಕೇಳಿ

  •  ಅವರನ್ನು ಅವಮಾನಿಸದಿರಿ
  •  ಅವರ, ಮನೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ
  •  ದೂರದಿಂದಲೇ ಕೈಸನ್ನೆಯ ಮೂಲಕ ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂಬ ಸಂದೇಶ ಅವರಿಗೆ ರವಾನಿಸಿ.
  •  ಅವರ ಮನೆಗೆ ಪೋಸ್ಟ್ ಕಾರ್ಡ್ ಮೂಲಕ, ಮೆಸೇಜ್ ಗಳ ಮೂಲಕ ಮನಸ್ಸಿಗೆ ನೆಮ್ಮದಿ ಕೊಡುವಂತಹ ಉತ್ತಮ ಸಂದೇಶಗಳನ್ನು ರವಾನಿಸಿರಿ.
  •  ಅವರ ಬಗ್ಗೆ ಚಾಡಿಮಾತುಗಳನ್ನೂ ಇತರರಲ್ಲಿ ಹೇಳದಿರಿ.
  • ಅವರ ಸಾಮಾಜಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲದಿದ್ದರೆ ಸೂಕ್ತ ಮುಂಜಾಗ್ರತಾ ಕ್ರಮಗಳಿಂದ ಅಕ್ಕಿ, ಬೇಳೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅವರಿಗೆ ರವಾನಿಸಿರಿ.
  •  ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿ. ಈ 7 ನಿಯಮ ಗಳನ್ನು ಅನುಸರಿಸಿದರೆ ಅವರು ಇನ್ನಷ್ಟು ಬೇಗನೆ ಈ ಸಾಂಕ್ರಾಮಿಕ ಪಿಡುಗಿನ ಕಪಿಮುಷ್ಠಿಯಿಂದ ಅವರು ಖಂಡಿತ  ಹೊರಬರಬಹುದು. ವ್ಯಕ್ತಿಗಳ ಮನಸ್ಸಿಂದ ಋಣಾತ್ಮಕ ಭಾವನೆಗಳನ್ನೂ ಹೋಗಲಾಡಿಸಿ ಧನಾತ್ಮಕ ಚಿಂತನೆ ತರುವಂತಹ ಮಾನವೀಯ ಕಾರ್ಯಗಳನ್ನೂ ನಾವು ನೀವು ಮಾಡಿದ ದಿನವೇ ಈ ಕೊರೋನ ಊರಿಂದ ಅಲ್ಲ, ದೇಶದಿಂದಲೇ ತೊಲಗುವುದರಲ್ಲಿ ಸಂಶಯವಿಲ್ಲ. ನೆನಪಿಡಿ, ಇವರಿಗೆ ಬೇಕಿರುವುದು ನಿಮ್ಮ ಅನುಕಂಪವಲ್ಲ ನಿಮ್ಮ ಮಾನವೀಯತೆ,ಧೈರ್ಯ ತುಂಬುವ ಮಾತುಗಳಷ್ಟೆ.
ಡಾ.ಶಶಿ ಕಿರಣ್ ಶೆಟ್ಟಿ ಉಡುಪಿ