ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ‘ಮಿನಿ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ

ಶಿರ್ವ: ಪದವಿ ವ್ಯಾಸಂಗ ಮಾಡುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಉಚಿತ ತರಬೇತಿಗಳನ್ನು ನೀಡಿ, ಸೂಕ್ತ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಬಂಟಕಲ್ಲು ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಹಾಗೂ ಶಿರ್ವ ಸಂತ ಮೇರಿ ಕಾಲೇಜು ಪರಸ್ಪರ ಒಡಂಬಡಿಕೆಯೊಂದಿಗೆ ಇಂದಿನಿಂದ ಎರಡು ದಿನಗಳ ಮಿನಿ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಾಗಾರವನ್ನು ಶಿರ್ವ ಕಾಲೇಜಿನ ಹೆನ್ರಿ ಕ್ಯಾಸ್ತಲೀನೊ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟಕಲ್ಲು ಕಾಲೇಜಿನ ಪ್ರಾಧ್ಯಾಪಕ ಡಾ. ರಾಘವೇಂದ್ರ ಎಸ್ ಮಾತನಾಡಿ, ಇಂದು ಆಧುನಿಕ ಜಗತ್ತು ಸಂಪೂರ್ಣವಾಗಿ ಡಿಜಿಟಲೀಕರಣವಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯು ಹೊಸ ಆಲೋಚನೆಗಳ ಆವಿಷ್ಕಾರಗಳು, ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಐಷಾರಾಮಿ ಜೀವನ ಶೈಲಿಗಳಿಗೆ ಕಾರಣವಾಗಿದೆ. ಇಂಟರ್ನೆಟ್‍ಗೆ ಸಂಪರ್ಕ ಹೊಂದಿದ ಅನೇಕ ಸಾಧನೆಗಳು ಜೀವನದ ವಿಧಾನವನ್ನು ಬದಲಾಯಿಸಿದೆ ಹಾಗೂ ಇಂತಹ ತಂತ್ರಜ್ಞಾನದ ಕಲಿಕೆಯು ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಹೆಚ್ಚಲು ಪೂರಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್‍ ಮಾತನಾಡಿ, ವಿದ್ಯಾರ್ಥಿಗಳಿಗೆ ಐಟಿ ಉದ್ಯಮದಲ್ಲಿ ಬಳಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಸುಧಾರಿತ ತಂತ್ರಜ್ಞಾನವನ್ನು ರೂಪಿಸಲು ಈ ಕಾರ್ಯಾಗಾರ ಸಹಾಯಕಾರಿಯಾಗಿದೆ ಎಂದು ಹೇಳಿದರು.

ಶಿರ್ವ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಮಾತನಾಡಿ, ಗುಣಮಟ್ಟದ ಉಪಕರಣಗಳು ಮತ್ತು ಉದ್ಯಮದ ಯೋಜನೆಗಳಿಗೆ ಒಡ್ಡಿಕೊಳ್ಳುವುದು ಈ ಕಾರ್ಯಾಗಾರದ ಮುಖ್ಯ ಉದ್ಧೇಶವಾಗಿದೆ ಎಂದರು.

ಬಂಟಕಲ್ ಕಾಲೇಜಿನ ಸಹ-ಪ್ರಾಧ್ಯಾಪಕಿ ಸಹನಾ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ಉನ್ನತ್ ಭಾರತ್ ಅಭಿಯಾನ್ ಸಂಯೋಜಕ ಶರತ್‍ ಕುಮಾರ್, ಉಪನ್ಯಾಸಕರಾದ ಪ್ರಕಾಶ್, ಸುಷ್ಮಾ, ದಿವ್ಯಶ್ರೀ, ಎಲ್ಲಾ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು. ಪ್ರೀತಿಕಾ ಮತ್ತು ಬಳಗದವರು ಪ್ರಾರ್ಥಿಸಿದರು. ಸೃಷ್ಟಿ ಸ್ವಾಗತಿಸಿದರು. ಫೈಜಾ ಭಾನು ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ವಂದಿಸಿದರು.