ಶಿರ್ವ: ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ಸಹಯೋಗದಲ್ಲಿ ಮಂಗಳೂರಿನ ಪ್ರತಿಷ್ಟಿತ ದಿಯಾ ಸಿಸ್ಟಮ್ ಸಂಸ್ಥೆ (ಗ್ಲೋ ಟಚ್ ಟೆಕ್ನಾಲಾಜಿಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ಗುರುವಾರ ಆಯೋಜಿಸಿತು.
ಈಗಾಗಲೇ ಬಿ.ಸಿ.ಎ., ಡಿಪ್ಲೊಮಾ(ಸಿ.ಎಸ್.), ಬಿ.ಎಸ್ಸಿ (ಸಿ.ಎಸ್.), ಬಿ.ಎಸ್ಸಿ (ಐ.ಟಿ) ಬಿ.ಇ. ಎಂ.ಎಸ್ಸಿ, ಎಂ.ಸಿ.ಎ. ಸ್ನಾತಕೋತ್ತರ ಪದವಿ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಬೆಳಿಗ್ಗೆ 9.30ರಿಂದ ಕಾಲೇಜಿನ ಹೆನ್ರಿ ಕ್ಯಾಸ್ತಲೀನೊ ಆಡಿಟೋರಿಯಂನಲ್ಲಿ ಮಂಗಳೂರಿನ ದಿಯಾ ಸಿಸ್ಟಮ್‍ನವರು ಕ್ಯಾಂಪಸ್ ಸಂದರ್ಶನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ದಿಯಾ ಸಿಸ್ಟಮ್ಸ್ ಸೀನಿಯರ್ ಮ್ಯಾನೇಜರ್ ಶ್ರೀನಿವಾಸ ಭಟ್ ಮಾತನಾಡಿ, ನಮ್ಮ ಮುಂದೆ ಪೂರ್ವಯೋಜಿತ ಆಧುನಿಕ ತಾಂತ್ರಿಕತೆ ಇದ್ದರೂ ದೋಷಗಳು ಕಂಡುಬರುವುದು ಸಹಜ. ದೋಷಗಳನ್ನು ಕಂಡುಹಿಡಿದು ಅದಕ್ಕೆ ಸೂಕ್ತವಾದ ಪರಿಹಾರೋಪಾಯಗಳನ್ನು ಕಾಲೇಜಿನ ಕಲಿಕಾ ಸಂದರ್ಭದಲ್ಲಿಯೇ ಯುವಜನತೆ ತಾಂತ್ರಿಕ ಕೌಶಲ್ಯಗಳನ್ನು ಅರಿತುಕೊಂಡರೆ ಮುಂದೆ ಉದ್ಯೋಗವನ್ನು ಪಡೆದಾಗ ಅದರಿಂದ ಮುಂದೆ ಅಭ್ಯರ್ಥಿಗೆ ಮತ್ತು ಕಂಪೆನಿಗೆ ಲಾಭವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ, ಭವಿಷ್ಯದಲ್ಲಿ ಸೂಕ್ತವಾದ ಉದ್ಯೋಗವನ್ನು ಪಡೆದುಕೊಳ್ಳಲು ಇಂತಹ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮವನ್ನು ಹಮ್ಮಿಕೊಂಡ ದಿಯಾ ಸಿಸ್ಟಮ್ ಕಂಪೆನಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಅಭ್ಯರ್ಥಿಗಳಿಗೆ ನಡೆದ ಈ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಾದ ಹುಬ್ಬಳ್ಳಿ, ಗದಗ, ಬೆಂಗಳೂರು, ಹಾಸನ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಪರಿಸರದ ಕಾಲೇಜುಗಳ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸುಮಾರು 190 ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ಸ್ ಹಿರಿಯ ನೇಮಕಾತಿ ಕಾರ್ಯನಿರ್ವಾಹಕರಾದ ಲಕ್ಷ್ಮೀಶ್ ಬಿ.ಎನ್, ಸಮೃದ್ಧಿ, ರಾಘವೇಂದ್ರ, ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು.
ಚಂದನಾ ಮತ್ತು ಬಳಗದವರು ಪ್ರಾರ್ಥಿಸಿದರು. ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿದರು. ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶದ ಸಂಯೋಜಕಿ ತನುಜಾ ಎನ್. ಸುವರ್ಣ ವಂದಿಸಿದರು. ದಿವ್ಯಶ್ರಿ ಕಾರ್ಯಕ್ರಮ ನಿರೂಪಿಸಿದರು.