ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ, ಧರ್ಮಶಿಕ್ಷಣ ವರ್ಗ ಪ್ರಾರಂಭ: ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ನಿರ್ಣಯ

ಉಡುಪಿ: ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ರವಿವಾರ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನ ಸಭೆ ನಡೆಯಿತು. ಉಡುಪಿ ಜಿಲ್ಲೆಯಾದ್ಯಂತ 100ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದು, ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ವರ್ಗ ಪ್ರಾರಂಭಿಸುವುದು ಇತ್ಯಾದಿ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ದೇವಸ್ಥಾನಗಳ ನಿರ್ವಹಣೆಯಲ್ಲಿ ಬರುವ ಕಾನೂನು ಸಮಸ್ಯೆಗಳಿಗೆ ನುರಿತ ವಕೀಲರು ಕಾನೂನು ಸಲಹೆ ನೀಡಿದರು.

ಸುಮಾರು 160ಕ್ಕೂ ಹೆಚ್ಚು ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು. ಪರಿಷತ್ತಿನ ಕೊನೆಯಲ್ಲಿ ಎಲ್ಲ ದೇವಸ್ಥಾನ ವಿಶ್ವಸ್ಥರು ಕೆಲವು ಠರಾವುಗಳಿಗೆ ಅನುಮೋದನೆ ನೀಡಿದರು.

ಉಡುಪಿ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು, ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ, ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಮೇಶ ಕಾರ್ಣಿಕ್‌, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕ ಮೋಹನ ಗೌಡ ಉಪಸ್ಥಿತರಿದ್ದರು.