ಡ್ರೀಮ್ಸ್‌ ಕ್ರಿಯೇಷನ್ಸ್‌ ಅರ್ಪಿಸುವ ರಾಕ್ಷಸ ‌ತುಳು ‌ಕಿರುಚಿತ್ರ ಬಿಡುಗಡೆ

ಉಡುಪಿ: ಡ್ರೀಮ್ಸ್‌ ಕ್ರಿಯೇಷನ್ಸ್‌ ಅರ್ಪಿಸುವ ‘ರಾಕ್ಷಸ’ ತುಳು ಕಿರುಚಿತ್ರವನ್ನು ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಪಿಎಸ್‌ಐ ವಾಯ್ಲೆಟ್‌ -ಮಿನಾ ಮಂಗಳವಾರ ಉಡುಪಿಯಲ್ಲಿ ಬಿಡುಗಡೆಗೊಳಿಸಿದರು.
ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ೨೦ಕ್ಕೂ ಅಧಿಕ ಹವ್ಯಾಸಿ ಕಲಾವಿದರು ಸೇರಿಕೊಂಡು ೨೦೧೫ರಲ್ಲಿ ಡ್ರೀಮ್ಸ್‌ ಕ್ರಿಯೇಷನ್ಸ್‌ ತಂಡವನ್ನು ರಚಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ನರಕಯಾತೆಯನ್ನು ನೋಡಿ ಅತ್ಯಾಚಾರಿಗಳ ರಾಕ್ಷಸತನ ಸುಟ್ಟು ಹೋಗಲಿ ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ತಯಾರಿಸಿದ್ದೇವೆ ಎಂದು ನಿರ್ದೇಶಕ ಸುಕೇಶ್‌ ಕುಮಾರ್‌ ಹೇಳಿದರು.
ಅಕ್ಕ ತಂಗಿ ಸಣ್ಣ ಸಂಸಾರದ ಮೇಲೆ ಕಾಮುಕ ರಾಕ್ಷಸರ ಕಣ್ಣು ಬಿದ್ದು ತಂಗಿಯ ಜೀವನ ಹಾಳಾದಾಗ ಏಕಾಂಗಿಯಾಗಿರುವ ಅಕ್ಕ ಧೈರ್ಯದಿಂದ ಕಾಮುಕರನ್ನು ಸದೆಬಡಿದು ಅವರೊಳಗಿರುವ ರಾಕ್ಷಸರನ್ನು ಸುಟ್ಟು ಹಾಕುವ ಕಥಾ ಹಂದರ ಈ ಚಿತ್ರದಲ್ಲಿದೆ. ಈ ಕಿರುಚಿತ್ರವನ್ನು ಕರ್ನಾಟಕದ ಹಳದೀಪುರದ ಅರುಣಾ ಶಾನುಭಾಗ್‌ ಅವರಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಠಾಣೆಯ ಪ್ರೊಬೆಷನರಿ ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಗೀತಾ, ಕಥೆ-ಚಿತ್ರೀಕರಣ- ಸಂಕಲನ ಮಾಡಿರುವ ಸುಹಾಶ್‌ ಶೆಣೈ, ಸಹಕಾರ ನೀಡಿದ ಗೋಪಾಲ್‌ಕೃಷ್ಣ ಶೆಣೈ, ಗಣೇಶ್‌ರಾಜ್‌ ಸರಳಬೆಟ್ಟು, ಕಲಾವಿದರಾದ ಸವಿತಾ ಸಾಲಿಯಾನ್‌, ವರ್ಷ ಅಂಚನ್‌, ಶ್ರೇಯಸ್‌ ತೊಟ್ಟಂ, ಭವಿಷ್‌ ಕುಂದರ್‌, ಜೆ.ಪಿ. ಮನೀಶ್‌, ದರ್ಶನ್‌ ಕೋಟ್ಯಾನ್‌, ಮೈಕಲ್‌ ಕೆ. ಸಿದ್ದಿ, ನಬೀಲ್‌ ಉಪಸ್ಥಿತರಿದ್ದರು.