ಡಾ.ವಿ.ಎಸ್. ಆಚಾರ್ಯ ಜನ್ಮ ದಿನದ ಸಂಸ್ಮರಣೆ, ವನಮಹೋತ್ಸವ

ಉಡುಪಿ, ಜುಲೈ 9: ಯುವಶಕ್ತಿ ರಾಷ್ಟ್ರದ ಉತ್ಥಾನಕ್ಕೆ ಸದ್ಬಳಕೆ ಮಾಡುವಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಶ್ರಮಿಸುತ್ತಿದೆ. ಕರ್ನಾಟಕ ರಾಜ್ಯದಾದ್ಯಂತ ಎಲ್ಲ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕೌಟ್ಸ್ ಮುಂದುವರಿದ ಭಾಗವಾದ ರೋವರ್ಸ್ ಹಾಗೂ ರೇಂಜರ್ಸ್ ಘಟಕಗಳನ್ನು ಸ್ಥಾಪಿಸುವಲ್ಲಿ ಅಂದಿನ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಕೊಡುಗೆ ಅಮೂಲ್ಯವಾದುದು ಎಂದು ಉಡುಪಿ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಡಾ. ವಿಜಯೇಂದ್ರ ವಸಂತ ರಾವ್ ಹೇಳಿದರು.
ಅವರು ಜುಲೈ 6 ರಂದು ಡಾ.ವಿ.ಎಸ್. ಆಚಾರ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಪ್ರಗತಿ ನಗರ, ಅಲೆವೂರು, ಮಣಿಪಾಲ ಆಯೋಜಿಸಲಾದ ಡಾ. ವಿ.ಎಸ್. ಆಚಾರ್ಯ ಜನ್ಮದಿನದ ಸಂಸ್ಮರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಡಾ. ಆಚಾರ್ಯರವರು ರಾಜ್ಯ ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ ಎಂದು ರಾಮಚಂದ್ರ ಉಪಾಧ್ಯಾಯ ನುಡಿದರು.
ವನಮಹೋತ್ಸವ ಮಹತ್ವದ ಕುರಿತು ಉಡುಪಿ ರೋಟರಿ ಕ್ಲಬ್‍ನ ಅಧ್ಯಕ್ಷ ಜನಾರ್ಧನ ಭಟ್ ಮಾತನಾಡಿದರು.
ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ. ಪೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಐ.ಕೆ.ಜಯಚಂದ್ರ, ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್, ಶಿಬಿರದ ನಾಯಕರಾದ ಡಾ. ರಾಮ ಶೆಟ್ಟಿಗಾರ್, ವಿವಿಧ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ 200 ರೋವರ್, ರೇಂಜರ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕರಾದ ಸುಮನ್ ಶೇಖರ್ ಹಾಗೂ ನಿತಿನ್ ಆಮಿನ್ ಕಾರ್ಯಕ್ರಮ ಸಂಘಟಿಸಿದರು.