ಮೈಸೂರು: ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಡಾ.ವಿಷ್ಣುವರ್ಧನ್ ಸ್ಮಾರಕ ಭವನದ ಉದ್ಘಾಟನೆಯು ಭಾನುವಾರ ನಡೆಯಿತು.
ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸ್ವಭಾವತಃ ಭಾವುಕ ಹಾಗೂ ಮಾನವೀಯತೆಯ ಗುಣಗಳುಳ್ಳ ಜೀವಿಯಾಗಿದ್ದ ವಿಷ್ಣುವರ್ಧನ್, ತೆರೆಯ ಮೇಲಿನ ಅವರ ಚಿತ್ರಗಳಲ್ಲಿಯೂ ಸಹ ಅದೇ ಗುಣಗಳುಳ್ಳ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮಾನವೀಯತೆಯ ಗುಣಗಳನ್ನು ತುಂಬಿದ್ದ ಯಜಮಾನರಾಗಿರಾದ್ದರು. ಅವರು ಸ್ಮಾರಕ ವಿಚಾರದಲ್ಲಿ ಹಲವಾರು ಅಡೆತಡೆಗಳು ಬಂದರೂ, ಕೊನೆಗೂ ವಿಷ್ಣುವರ್ಧನ್ ರವರ ಹುಟ್ಟೂರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ನಾಗರಹಾವು ಸಿನೆಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಡಾ ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಆಡಿಟೋರಿಯಂ, ಗ್ಯಾಲರಿ ಮತ್ತು ತರಬೇತಿ ಕೇಂದ್ರಗಳಿದ್ದು ಇದರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದ ಅವರು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬೇಡಿಕೆಯನ್ನು ಪರಿಗಣಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಹದಿಮೂರು ವರ್ಷಗಳ ತಪಸ್ಸು ಫಲ ನೀಡಿದ್ದು ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಮಾಡುವ ಕನಸು ನನಸಾಗಿದೆ ಎಂದರು.
ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ದ್, ನಟ ಅನಿರುದ್ದ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ , ಜಿ.ಟಿ ದೇವೇಗೌಡ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು