ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಅಂಗಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಂಗಳೂರಿನ ಡೀನ್ ಹಾಗೂ ಸಮುದಾಯ ಆರೋಗ್ಯ ವಿಭಾಗದ ಪ್ರೊಫೆಸರ್ ಡಾ| ಬಿ. ಉನ್ನಿಕೃಷ್ಣನ್ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದ ಪ್ರೊಫೆಸರ್ ಡಾ| ಶಿರನ್ ಶೆಟ್ಟಿ ಅವರು ಪ್ರತಿಷ್ಟಿತ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್, ಎಡಿನ್ ಬರ್ಗ್ (FRCP Edin) ಸಂಸ್ಥೆಯ ಗೌರವಾನ್ವಿತ ಫೆಲೋ ಆಗಿ ಆಯ್ಕೆಯಾದ ನಿಮಿತ್ತ, ಮಣಿಪಾಲದಲ್ಲಿ ಮಂಗಳವಾರ ಸನ್ಮಾಸಲಾಯಿತು.
ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಹಾಗೂ ಕೊಡುಗೆಗಳನ್ನು ನೀಡಿದ ವೈದ್ಯರಿಗೆ ಜಾಗತಿಕ ಮಟ್ಟದ ಮನ್ನಣೆಯಾಗಿ ಕೊಡಮಾಡುವ ಪ್ರತಿಷ್ಠಿತ ರಾಯಲ್ ಕಾಲೇಜ್ ಫೆಲೋಶಿಪ್ ಅನ್ನು ಡಾ| ಬಿ.ಉನ್ನಿಕೃಷ್ಣನ್ ಹಾಗೂ ಡಾ| ಶಿರನ್ ಶೆಟ್ಟಿ ಅವರಿಗೆ ನೀಡಲಾಗಿದೆ.
ಮಾಹೆ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ‘ಡಾ| ಬಿ. ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರು ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್‌ಬರ್ಗ್‌ನ ಫೆಲೋ ಆಗಿ ಆಯ್ಕೆಯಾಗಿರುವುದು ಮಾಹೆ ಸಂಸ್ಥೆಗೆ ಹಾಗೂ ಇಡೀ ಶೈಕ್ಷಣಿಕ ಮತ್ತು ವೈದ್ಯಕೀಯ ಜಗತ್ತಿಗೆ ಅಪಾರ ಹೆಮ್ಮೆಯ ವಿಷಯ. ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮನ್ನಣೆಯು ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರಗಳಿಗೆ ಅವರು ನೀಡಿರುವ ಅತ್ಯುತ್ತಮ ಕೊಡುಗೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಮಾಹೆ ಕುಲಪತಿ ಡಾ| ಶರತ್ ಕೆ. ರಾವ್ ಅವರು ಮಾತನಾಡಿ, ʼಡಾ| ಬಿ. ಉನ್ನಿಕೃಷ್ಣನ್ ಹಾಗೂ ಡಾ| ಶಿರನ್ ಶೆಟ್ಟಿ ಅವರ ಈ ಸಾಧನೆ ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಇದು ಎತ್ತಿ ತೋರಿಸುತ್ತದೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಆರೋಗ್ಯ ರಕ್ಷಣೆಯ ಪ್ರಗತಿಗೆ ಅವರ ಮುಡುಪಾದ ಸೇವೆ ಸಂಸ್ಥೆಗೆ ಅಪಾರ ಕೀರ್ತಿಯನ್ನು ತಂದಿದೆ ಹಾಗೂ ಇದು ವೈದ್ಯಕೀಯ ಮತ್ತು ಶೈಕ್ಷಣಿಕ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದೆ ಎಂದರು.
1681ರಲ್ಲಿ ಆರಂಭವಾದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್‌ಬರ್ಗ್ ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಸಂಸ್ಥೆಯಾಗಿದ್ದು, ಜಾಗತಿಕವಾಗಿ ರೋಗಿಗಳ ಆರೈಕೆ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ.
ಡಾ| ದಿಲೀಪ್ ನಾಯಕ್, ಸಹ ಕುಲಪತಿಗಳು (ಮಂಗಳೂರು ಕ್ಯಾಂಪಸ್) ಸ್ವಾಗತಿಸಿದರು ಹಾಗೂ ಡಾ| ಗಿರಿಧರ ಕಿಣಿ, ಕುಲ ಸಚಿವರು, ಮಾಹೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಾಹೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯ ಕಾಲೇಜಿನ ಹಿರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.

















