ಆಹಾರದ ಸೇವನೆಗೂ ಒಂದ್ ಕ್ರಮ ಉಂಟು: ಆಹಾರ ಕ್ರಮದ ಬಗ್ಗೆ ಡಾ.ಹರ್ಷಾ ಕಾಮತ್ ಟಿಪ್ಸ್

ಆಹಾರ ಸೇವನೆಯ ಬಗ್ಗೆ ನಾವು ಈ ಬ್ಯುಸಿ ದಿನಗಳಲ್ಲಿ ಅಷ್ಟೊಂದು ಯೋಚಿಸುವುದೇ ಇಲ್ಲ. ಸಿಕ್ಕಿದನ್ನೆಲ್ಲಾ ತಿಂದು ಬಿಡುತ್ತೇವೆ. ಒಟ್ಟಾರೆ ಆಹಾರ ಹೊಟ್ಟೆಗೆ ಹೋದ್ರೆ ಆಯ್ತು ಎನ್ನುವ ಮನಃಸ್ಥಿತಿ ನಮ್ಮದು. ಆದರೆ  ಆಹಾರ ಸೇವನೆಗೂ ಒಂದಷ್ಟು ಕ್ರಮಗಳಿವೆ. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎನ್ನುವ ಬಗ್ಗೆ ಕಾರ್ಕಳದ ಡಾ. ಹರ್ಷಾ ಕಾಮತ್ ಇಲ್ಲಿ  ಒಂದಷ್ಟು ಸಲಹೆ ನೀಡಿದ್ದಾರೆ.

—————————————————————————————————

ಒಂದೊಂದು ರೀತಿಯ ಆಹಾರಕ್ಕೂ ಒಂದೊಂದು ರೀತಿಯ ಗುಣಗಳಿವೆ. ಒಂದು ಆಹಾರ ನಮ್ಮ ದೇಹ ಪ್ರಕೃತಿಗೆ ಸೂಕ್ತವೆನ್ನಿಸಿದರೆ, ಮತ್ತೊಬ್ಬರ ದೇಹ ಪ್ರಕೃತಿಗೆ ಆ ಆಹಾರ ಸೂಕ್ತವೆನ್ನಿಸದೇ ಇರಬಹುದು.

ಈ ಆಹಾರದ ಬಗ್ಗೆ ಆಯುರ್ವೇದದಲ್ಲಿ ಏನು ಹೇಳಿದೆ ಎಂದರೆ , ನಾವು ಯಾವ ಸ್ಥಳದಲ್ಲಿ ವಾಸಿಸುತ್ತೇವೆಯೋ ಅಲ್ಲಿ ದೊರೆಯುವ ದವಸ, ಧಾನ್ಯ, ಹಣ್ಣು, ಹಂಪಲು, ಎಣ್ಣೆ ನಮ್ಮ ದೇಹಕ್ಕೆ ಒಳ್ಳೆಯದು. ನಾವು ಚಿಕ್ಕಂದಿನಿಂದ ಬೆಳೆದ ಊರಿನ ವಾತಾವರಣ ನಮ್ಮ ದೇಹಕ್ಕೆ ಉತ್ತಮ, ಆ ಊರಿನ ಆಹಾರವೇ ದೇಹಕ್ಕೆ ಉತ್ತಮ ಎನ್ನುವ ಕುರಿತು ಆಯುರ್ವೇದದಲ್ಲಿ ಪ್ರಸ್ತಾಪವಿದೆ.

ದೇಹ ಪ್ರಕೃತಿ, ಒಂದೊಂದು ರೀತಿ:

ನಮ್ಮ ದೇಹ ಯಾವ ಪ್ರಕೃತಿಯಿಂದ ಕೂಡಿದೆಯೆಂದು ತಿಳಿದುಕೊಂಡು ಅದಕ್ಕನುಸಾರವಾಗಿ ನಾವು ಆಹಾರ ಸೇವಿಸುವುದು ಒಳ್ಳೆಯದು. ಯಾಕೆಂದರೆ ಪ್ರತೀಯೊಬ್ಬರ ದೇಹಪ್ರಕೃತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಕಫ ಪ್ರಕೃತಿವುಳ್ಳವರ ಜೀರ್ಣ ಶಕ್ತಿ ಕಮ್ಮಿ ಇರುವುದರಿಂದ ದಿನಕ್ಕೆ ಎರಡು ಬಾರಿ ಊಟ ಸೇವಿಸುವುದು ಒಳ್ಳೆಯದು .ಇದರಿಂದ ಜಠರಾಗ್ನಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ. ಪಿತ್ತ ಪ್ರಕೃತಿವುಳ್ಳವರ ಜೀರ್ಣಶಕ್ತಿ  ಉತ್ತಮವಿರುವುದರಿಂದ ಮೂರು ಬಾರಿ ಊಟವನ್ನು(meals) ಸೇವಿಸಬಹುದು. ವಾತ ಪ್ರಕೃತಿಯವರ ಜೀರ್ಣಶಕ್ತಿ ಪ್ರಬಲ ಇರುವುದರಿಂದ ದಿನಕ್ಕೆ  ನಾಲ್ಕೈದು ಸರ್ತಿ ಊಟ ಮಾಡಬಹುದು .

ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಹಾಗೂ ಜೀವನ ಶೈಲಿಯಿಂದ ವಿವಿಧ ರೋಗಗಳಿಗೆ ಮುಕ್ತ ಆಹ್ವಾನ ನಾವೇ ನೀಡಿದಂತಾಗಿದೆ. ಇದನ್ನು  ತಡೆಗಟ್ಟುವ ಕ್ರಮ ಇಲ್ಲಿದೆ ನೋಡಿ:

 ಹೇಗಿರ್ಬೇಕು ನಾವು ತಿನ್ನೋ ಆಹಾರ:

*ನಾವು ಸೇವಿಸುವ ಆಹಾರ ಯಾವಾಗಲೂ ಬಿಸಿ, ಸ್ನಿಗ್ಧ ಹಾಗೂ ಮೃದು ಇರಲಿ .

*ಹೊಟ್ಟೆ ಬಿರಿಯುವಷ್ಟು ಆಹಾರ ತಿನ್ನಬಾರದು. ಹೊಟ್ಟೆಯ ಅರ್ಧ ಭಾಗ ಘನ ಆಹಾರ, ಕಾಲುಭಾಗ ದ್ರವ ಆಹಾರ ಹಾಗೂ ಮಿಕ್ಕ ಕಾಲು ಭಾಗ ಖಾಲಿ ಬಿಟ್ಟಿರಿ ಇದರಿಂದ ಸೇವಿಸಿದ ಆಹಾರ ಜೀರ್ಣವಾಗುತ್ತದೆ

*ಮೊದಲು ತಿಂದ ಹಿಂದಿನ ಆಹಾರ ಜೀರ್ಣವಾಗದೆ ಮತ್ತೆ ಆಹಾರ ಸೇವಿಸಕೂಡದು.

*ಮಾತನಾಡುತ್ತಾ, ನಗುತ್ತಾ ,ಆತುರದಿಂದ ಆಹಾರ ಸೇವಿಸುವುದು ಅಥವಾ ಬಹಳ ನಿಧಾನವಾಗಿ ಸೇವಿಸಬಾರದು.

*ಆಹಾರ ಸೇವಿಸುವಾಗ ಟಿವಿ ಮೊಬೈಲ್ ನೋಡುತ್ತಾ ಆಹಾರ ಸೇವಿಸಬೇಡಿ.

* ಆಹಾರದ ಸ್ವಾದವನ್ನು ಮನಃಪೂರ್ವಕವಾಗಿ  ಆಸ್ವಾದಿಸಿರಿ

*ಊಟವಾದ ಒಂದು ಗಂಟೆಯ ನಂತರ ಹಣ್ಣುಗಳನ್ನು ಸೇವಿಸಿರಿ ಇದರಿಂದ ತಿಂದ ಆಹಾರ ಜೀರ್ಣವಾಗುತ್ತದೆ .

* ಆಹಾರ ಸೇವಿಸಿದ ಮೇಲೆ ಕನಿಷ್ಠ ೩ಗಂಟೆ ಒಳಗೆ ಏನೂ ಸೇವಿಸಕೂಡದು.

ಹೀಗ್ ಮಾಡ್ಬೇಡಿ:

*ಹಸಿವಾಗದಿದ್ದರೂ ಆಹಾರ ಸೇವಿಸುವುದು

 *ಆಹಾರ ಸೇವಿಸಿದ ಸ್ವಲ್ಪ ಹೊತ್ತಿನಲ್ಲಿ ಪುನಃ ಸೇವಿಸುವುದು

* ಅಧಿಕ ಊಟ ಮಾಡುವುದು

*ಸ್ವಲ್ಪ ಊಟ ಮಾಡುವುದು

*ಊಟವಾದ ಮೇಲೆ ತಣ್ಣೀರು ಕುಡಿಯುವುದು ಅಥವಾ ಊಟ ಮಾಡುವಾಗ ಅಧಿಕ ನೀರು ಸೇವಿಸುವುದು

 *ಜೀರ್ಣವಾಗದೆ ಇದ್ದಾಗ ಆಹಾರ ಸೇವಿಸಬೇಡಿ

 *ಹಿಂದಿನ ದಿನದ ಆಹಾರ ಫ್ರಿಜ್ಜಿನಲ್ಲಿ ಇಟ್ಟ ಆಹಾರ ಸೇವಿಸಬೇಡಿ

 *ಅಧಿಕ ಮಸಾಲೆ ಇರುವ ಆಹಾರ ಅಧಿಕ ಉಪ್ಪು ಇರುವ ಆಹಾರ ಸೇವಿಸಬೇಡಿ.

ಡಾ.ಹರ್ಷಾ ಕಾಮತ್