ಉಡುಪಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೊಡ ಮಾಡುವ 2022 ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಯನ್ನು ಉಡುಪಿಯ ಪ್ರಸಿದ್ಧ ಸಾಂಸ್ಕೃತಿಕ ಮುಂದಾಳು, ಉದ್ಯಮಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರಿಗೆ ಗುರುವಾರದಂದು ಪ್ರದಾನ ಮಾಡಲಾಯಿತು. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಿಶ್ವವಿದ್ಯಾಲಯದ 6 ಮತ್ತು 7ನೇ ಘಟಿಕೋತ್ಸವದಲ್ಲಿ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪದವಿಯನ್ನು ಪ್ರದಾನ ಮಾಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಅವರು ಈ ಪ್ರತಿಷ್ಠಿತ ಗೌರವವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಸಿ.ಟಿ.ಗುರುಪ್ರಸಾದ್, ರಿಜಿಸ್ಟ್ರಾರ್ (ಪರೀಕ್ಷಾ) ಪ್ರೊ.ಎನ್.ಎಂ.ಸಾಲಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಯಕ್ಷಗಾನ ಹಾಗೂ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈ ಪದವಿಯನ್ನು ನೀಡಿ ಗೌರವಿಸಿದೆ. ಡಾ.ತಲ್ಲೂರು ಅವರು ಓರ್ವ ಶ್ರೇಷ್ಠ ಬರಹಗಾರನಾಗಿ, ಯಕ್ಷಗಾನ ಕಲಾ ಪೋಷಕರಾಗಿ, ಯಕ್ಷಗಾನ ಕಲಾವಿದನಾಗಿ, ಸಮಾಜ ಸೇವೆ, ಧಾರ್ಮಿಕ ಮುಂದಾಳು, ಸಂಘಟಕ, ಯಶಸ್ವಿ ಉದ್ಯಮಿಯಾಗಿ ಸಮಾಜಕ್ಕೆ ತನ್ನ ಉತ್ಕೃಷ್ಠ ಕೊಡುಗೆಯನ್ನು ನೀಡುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.