ಇವರು ಬರೆದ “ಚಿಂಬುರಿ” ಅನ್ನುವ ದಲಿತ ಜನಾಂಗದ ಕರಾಳ ಕಥಾಹಂದರವುಳ್ಳ ಕಾದಂಬರಿಯನ್ನು ನೀವು ಓದಿರಲಿಕ್ಕಿಲ್ಲ. ಯಾಕೆಂದರೆ ಆ ಪುಸ್ತಕಕ್ಕೆ ಪ್ರಶಸ್ತಿ ಬಂದಿಲ್ಲ. ಹತ್ತಾರು ಸಾಪ್ತಾಹಿಕಗಳಲ್ಲಿ ಆ ಪುಸ್ತಕದ ವಿಮರ್ಶೆ ಬಂದಿಲ್ಲ. ಇವರು ಯಾರನ್ನೋ ಬಕೇಟು ಹಿಡಿದು ಅದರ ಕುರಿತು ಗುಣಗಾನ ಮಾಡಿಸಿಲ್ಲ. ಜಾಲತಾಣ, ಸಿಕ್ಕ ಸಿಕ್ಕ ಕಾರ್ಯಕ್ರಮಗಳಲ್ಲಿ ಅದನ್ನು ಪ್ರಚಾರದಲ್ಲಿರುವಂತೆ ನೋಡಿಕೊಂಡಿಲ್ಲ. ಇವರ “ತೆಂಡೆಹೂವು” ಅನ್ನೋ ಕಣ್ಣೀರು ಬರಿಸುವ ಕವನ ಸಂಕಲನದ ಹೆಸರನ್ನು, “ಬೂಬ”ಎನ್ನುವ ದಲಿತ ವ್ಯಕ್ತಿಯೊಬ್ಬನ ಬದುಕಿನ ಕಂತೆಯನ್ನೊಳಗೊಂಡ ಕಥಾ ಸಂಕಲನದ ಹೆಸರನ್ನೂ ನೀವು ಕೇಳಿರಲಿಕಿಲ್ಲ, ವಿಭಿನ್ನ ಕಥವಸ್ತುವುಳ್ಳ ಹಬಾಶಿಕ ನಾಟಕದ ಕುರಿತು ನಿಮಗೆ ಗೊತ್ತಿರಲಿಕ್ಕಿಲ್ಲ, ಇವರ ಕೃತಿಗಳನ್ನು ಓದಿ ಕಣ್ಣೀರಾದ ಕೆಲವರು ಆ ಕೃತಿಯ ಕುರಿತು ಬರೆದರು. ಆದರೆ ಈ ಕೃತಿ ಮುನ್ನಲೆಗೆ ಬರಬಾರದು ಇವರಿಗೆ ಜನಪ್ರಿಯತೆ ಸಿಗಬಾರದು ಎಂದೆನ್ನುವ ದೊಡ್ಡದ್ದೊಂದು ಬಣ ಆ ಕೃತಿಯ ಹೆಸರು ಎಲ್ಲೂ ಕೇಳದಂತೆ ನೋಡಿಕೊಂಡರು. ಎಷ್ಟೆಂದರೆ ಉತ್ಕೃಷ್ಟ ಕಾದಂಬರಿಯನ್ನು ಕಳಪೆ ಗುಣಮಟ್ಟದಲ್ಲಿ ಪ್ರಕಾಶನವೊಂದು ಮುದ್ರಿಸಿತು. ಆ ಕೃತಿಯ ಕುರಿತು ಪ್ರಚಾರ ಮಾಡದೇ ನಿರ್ಲಿಪ್ತವಾಯಿತು.ಇವರ ಕವನ ಸಂಕಲನಗಳಿಗೂ ಇದೇ ಗತಿಯಾಯಿತು. ಬಡತನದಲ್ಲೇ ಬೆಳೆದ ಇವರು ಇವೆಲ್ಲ ನೋವನ್ನೂ ಒಳಗೊಳಗೆ ನುಂಗಿಕೊಂಡರು.
ಹೆಸರು ಡಾ.ಸುರೇಶ ಮೆರಿಣಾಪುರ(ಮಸುಮ) ಬಾಲ್ಯದಿಂದಲೂ ನೋವಿನ ಪೆಟ್ಟು ತಿನ್ನುತ್ತ ಬೆಳೆದ, ಬರೆದ ದಲಿತ – ಬಂಡಾಯ ಕವಿ, ಆದರೆ ಯಾವ ಪಂಥದಲ್ಲೂ ಗುರುತಿಸಿಕೊಳ್ಳದೇ ಮಾನವೀಯವಾಗಿ ಬರೆದ ಬರಹಗಾರ.
ವಿದ್ಯಾರ್ಥಿಗಳಿಗೆ ಹಳೆಕನ್ನಡವನ್ನು ಪದ್ಯದಲ್ಲೇ ಹಾಡಿ ಅರ್ಥ ಮಾಡಿಸುವ ಉಪನ್ಯಾಸಕ, ತುಳು ಭಾಷೆ, ದೈವಾರಾಧನೆ, ಕರಾವಳಿಯ ಸಂಸ್ಕೃತಿಯ ಕುರಿತು ಅಪಾರ ಪಾಂಡಿತ್ಯವಿದ್ದ ವ್ಯಕ್ತಿ. ಕಾರ್ಕಳದ ಮೆರಿಣಾಪುರ ಅನ್ನೋ ಹಸಿರ ಪರಿಸರದಲ್ಲಿ ಯಾವ ರಾಜಕೀಯ, ಲಾಬಿ, ಆಡಂಭರ, ತೋರಿಕೆ, ಬಕೆಟ್ ಸಂಸ್ಕೃತಿ ಇವ್ಯಾವುದರ ಹಂಗಿಲ್ಲದೇ ಇದ್ದು ಕೆಳಜಾತಿಯ ನೋವು,ನಲಿವು,ವಿಷಾದ,ದೈನ್ಯತೆ,ಸಾಹಸ,ನೆಲ ಸಂಸ್ಕೃತಿ,ಪರಿಸರ ಎಲ್ಲವನ್ನೂ ಬರೆದರು,ಬರೆದಂತೆ ಬದುಕಿದರು.
ಸಾಹಿತ್ಯ ವೇದಿಕೆಗಳಲ್ಲಿ ಒಂದಕ್ಷರ ಬರೆಯದವರು, ಜೀವನಪ್ರೀತಿ ಇಲ್ಲದವರು ಅಧ್ಯಕ್ಷರಾದರು. ಯಾರಿಗ್ಯಾರಿಗೋ ಬೆಣ್ಣೆ ಹಚ್ಚಿ ಮೇಲೆ ಬಂದರು. ಪ್ರಚಾರ ಪಡೆದರು ಎನ್ನುವ ನೋವು ಅವರಿಗಿತ್ತು
.ಸುರೇಶ ಅವರು ನೇರ ನಿಷ್ಠುರವಾಗಿ ಅವೆಲ್ಲವನ್ನೂ ವಿರೋಧಿಸುತ್ತ,ಬೆಣ್ಣೆ ಹಚ್ಚುವವರನ್ನೂ, ಹಚ್ಚಿಸಿಕೊಳ್ಳುವವರನ್ನೂ ದೂರವಿಟ್ಟರು.ಎಷ್ಟೋ ಕಿ.ಮೀ ಗಟ್ಟಲೇ ನಡೆದುಕೊಂಡೇ ಹೋದರು, ಹಾಗೆ ಹೋಗುವಾಗ ಜೊತೆಗಿದ್ದ ನನ್ನಂತವರಲ್ಲಿ ನೋವು ಬಿಚ್ಚಿಟ್ಟರು,ಕತೆ ಹೇಳಿದರು, ಮಾತಲ್ಲೇ ವಿಷಾದದ ಕವಿತೆ ಬರೆದರು. ಕೆಲವೊಮ್ಮೆ ಕಣ್ಣಾರೆ ಕಂಡ ವ್ಯವಸ್ಥೆಯ ವಿರುದ್ದ ಒಂಟಿ ಹೋರಾಟಕ್ಕೂ ಇಳಿದರು.
ಕನ್ನಡ ಭಾಷೆ-ತುಳು ಭಾಷೆಯಲ್ಲಿ ಇವರಿಗಿದ್ದ ಪಾಂಡಿತ್ಯಕ್ಕೆ ,ಅರ್ಹತೆಗೆ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಮೆರೆಯಬೇಕಿತ್ತು.ಆದರೆ ಲಾಬಿ, ರಾಜಕೀಯ,ಮೇಲ್ಜಾತಿಯ ಕೆಲವೊಂದು ಧೋರಣೆಗಳಿಂದ ಉಪನ್ಯಾಸಕರ ವೃತ್ತಿಯಲ್ಲಿ ಅಂದುಕೊಂಡಂತೆ ಬದುಕೂ ಕಟ್ಟಿಕೊಳ್ಳಲು ಆಗಲಿಲ್ಲ. ಮುಂದೆ ಹೋಗಲು ವ್ಯವಸ್ಥೆ ಬಿಡಲಿಲ್ಲ. ಹಣ ಕೊಟ್ಟು ಮುಂದೆ ಹೋಗಲು ಅಂತಃಕರಣ ಬಿಡಲಿಲ್ಲ.
ಆದರೂ ಇವರ ಅರ್ಹತೆ ಗುರುತಿಸಿ ಶಿವರಾಮಕಾರಂತ ಪ್ರಶಸ್ತಿ ಬಂದಾಗ, “ನನ್ನನ್ನು ಈಗಲಾದರೂ ಗುರುತಿಸಿದರಲ್ಲ” ಎಂದು ಸಂಭ್ರಮಿಸಿದರು. ಇವರ ಪ್ರತಿಭೆ, ಬರಹದ ರುಚಿ ತಿಳಿದವರು ಇವರನ್ನು ಕಂಡು ತುಳು ಭಾಷೆ ಸಂಸ್ಕೃತಿ ಮೊದಲಾದ ಕುರಿತು ಇವರಿಂದ ಮಾಹಿತಿ ಪಡೆದು ಅಧ್ಯಯನ ಮಾಡಿದರು.(ಇವರ ಕುರಿತು ವಿದ್ಯಾರ್ಥಿಯೊಬ್ಬರು PhD ಕೂಡ ಮಾಡುತ್ತಿದ್ದಾರೆ)
ಹೀಗೆ ಬರೆದಂತೆ ಬದುಕಿದ, ಬದುಕಿದಂತೆ ಬರೆದ ಡಾ.ಸುರೆಶ ಮೆರಿಣಾಪುರ ಅವರು ನಿನ್ನೆಯಷ್ಟೇ ಬಾಳಿನ ಪಯಣ ಮುಗಿಸಿದ್ದಾರೆ. ಇನ್ನೂ 47 ವರ್ಷ. ತುಳುನಾಡಿನ, ಯಾರೂ ಈ ಕುರಿತು ಬರೆಯದ ಮಹತ್ವಪೂರ್ಣ ಕಥಾಹಂದರಪುಳ್ಳ ಇವರ ಐತಿಹಾಸಿಕ ಕಾದಂಬರಿ ಇನ್ನೇನು ಪೂರ್ಣವಾಗುದರಲ್ಲಿತ್ತು. ಅಷ್ಟರಲ್ಲಿ ಬದುಕು ಅನ್ನೋ ಕಾದಂಬರಿಯ ಪುಟ ಮುಗಿದೇ ಹೋಗಿದೆ.
ಕೆಟ್ಟ ಜಾತಿ ವ್ಯವಸ್ಥೆ, ಲಾಬಿ, ಶ್ರೀಮಂತಿಕೆ, ಇದ್ದವರಿಗೆಲ್ಲಾ ಬಕೇಟು ಹಿಡಿದು ಮೆರೆಯುವ ಕೆಲವರ ದಾಹ, ಪ್ರಶಸ್ತಿ, ಪ್ರತಿಷ್ಠೆಯ ಮುಂದೆ ಇವರೀಗ ಮೌನವಾಗಿ ಹೋಗಿದ್ದಾರೆ.
ಒಂದು ಪ್ರಶ್ನೆ: ಬರಹಗಾರ, ಬದುಕಿದಂತೆ ಬರೆಯದೇ ಅಥವಾ ಬರೆದಂತೆ ಬದುಕದೇ ಯಾರಿಗೋ ಬೆಣ್ಣೆ ಹಚ್ಚುತ್ತ, ಪ್ರಶಸ್ತಿಗಾಗಿ ದೊಡ್ಡವರನ್ನು ಹತ್ತಿರಿಟ್ಟುಕೊಳ್ಳುತ್ತ ಇರಬೇಕಾ? ಹಾಗೆ ಇರುವವರು ನಿಜವಾದ ಬರಹಗಾರನೇ? ಹಾಗಿದ್ದರೆ ಮಾತ್ರ ಬರಹಗಾರ ಬರೆಹಗಾರನೆಂದು ಸಮಾಜದಲ್ಲಿ ಕರೆಸಿಕೊಳ್ಳುತ್ತಾನಾ? ಬರಹಗಾರನಾಗಬೇಕಾದರೆ ತನ್ನನ್ನು ತಾನು ಆಗಾಗ ಪ್ರಚಾರದಲ್ಲಿಟ್ಟುಕೊಳ್ಳಬೇಕಾ? ಅವನ ಕೃತಿ ಕುರಿತು ನಾಲ್ಕು ಜನ ಮಾತಾಡುವಂತೆ ನೋಡಿಕೊಳ್ಳಬೇಕಾ?ಹಾಗೆ ಮಾಡದಿದ್ದರೆ ಅವನ ಬರಹ ಎಲ್ಲರ ದೃಷ್ಟಿಯಲ್ಲಿ ಬರಹವೇ ಆಗುವುದಿಲ್ಲವೇ?ಪುಸ್ತಕವೂ ಪುಸ್ತಕವೆಂದು ಕರೆಸಿಕೊಳ್ಳುವುದಿಲ್ಲವೇ?” ನೂರಾರು ಪ್ರಶ್ನೆ ಕಾಡುತ್ತದೆ. ಡಾ.ಸುರೇಶರಂತವರು ನಿದರ್ಶನ ಮಾತ್ರ, ಇವರಂತಹ ಪ್ರಾಮಾಣಿಕ ಬರಹಗಾರರು ಯಾವುದೋ ದೂರದ ಊರಿನ ಮೂಲೆಯನ್ನು ಕೂತು ಬರೆಯುತ್ತಿರಬಹುದು ಅನ್ನಿಸುತ್ತಿದೆ
-ಪ್ರಸಾದ್ ಶೆಣೈ ಆರ್.ಕೆ