ಸಾಗರ: ಕರ್ನಾಟಕ ಸರ್ಕಾರದ ವರ್ಗಾವಣೆ ಆದೇಶದಂತೆ ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಪ್ರತಿಭಾ ಆರ್ ಅವರು ಮೇ 30ರಂದು ಸಾಗರ ತಾಲೂಕು ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.ಜನಪರ ಆಡಳಿತ, ಸಾಮಾಜಿಕ ಕಳಕಳಿ ಹಾಗೂ ಶೈಕ್ಷಣಿಕ ಸಾಧನೆಗಳ ಮೂಲಕ ಗುರುತಿಸಿಕೊಂಡಿರುವ ಡಾ. ಪ್ರತಿಭಾ ಆರ್ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಅವರು ವಿವಿಧ ಉನ್ನತ ವಿದ್ಯಾರ್ಹತೆಗಳನ್ನು ಹೊಂದಿದ್ದು, ಶಿಕ್ಷಣ ಇಲಾಖೆಯಲ್ಲಿ ವಿಷಯ ಪರಿವೀಕ್ಷಕ ಹಾಗೂ ಡಯೆಟ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಬಳಿಕ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಡಳಿತ ಸೇವೆಗೆ ಸೇರ್ಪಡೆಗೊಂಡ ಅವರು ಮಾಗಡಿ, ಕಾಪು ಹಾಗೂ ಕಾರ್ಕಳ ಸೇರಿದಂತೆ ಹಲವು ತಾಲೂಕುಗಳಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಅವರು ಪಡೆದಿದ್ದಾರೆ.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿರುವ ಡಾ. ಪ್ರತಿಭಾ ಆರ್ ಅವರು ಕನ್ನಡ ಭಾಷೆ, ಸಾಮಾಜಿಕ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ.
“ಯಾರು ಮೇಲಲ್ಲ, ಯಾರು ಕೀಳಲ್ಲ, ಎಲ್ಲರೂ ಸಮಾನರು” ಎಂಬ ಸಂದೇಶವನ್ನು ತಮ್ಮ ಭಾಷಣಗಳ ಮೂಲಕ ಸಮಾಜಕ್ಕೆ ತಲುಪಿಸುತ್ತಿದ್ದಾರೆ.
ಅವರ ಜನಪರ ಆಡಳಿತ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ 2025ರಲ್ಲಿ ಜೀ ಕನ್ನಡ ನ್ಯೂಸ್ ವತಿಯಿಂದ ಪ್ರದಾನವಾಗುವ ಪ್ರತಿಷ್ಠಿತ ‘ವೀರ ಕನ್ನಡತಿ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿಯು ಅವರ ಸೇವಾ ಮನೋಭಾವ, ಆಡಳಿತಾತ್ಮಕ ದಕ್ಷತೆ ಹಾಗೂ ಸಾಮಾಜಿಕ ಬದ್ಧತೆಗೆ ಸಂದ ಗೌರವವಾಗಿದೆ.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ವೈಭವಕ್ಕೆ ಹೆಸರುವಾಸಿಯಾದ ಸಾಗರ ತಾಲೂಕಿಗೆ ಇಂತಹ ಅನುಭವಿ ಮತ್ತು ಜನಸ್ನೇಹಿ ಅಧಿಕಾರಿ ಆಗಮಿಸಿರುವುದು ಸಾರ್ವಜನಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

















