ಉಡುಪಿ, ಜ.24: ಶಿವಕ್ಯರಾದ ಸಿದ್ಧಗಂಗಾ ಮಠದ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ, ಮೌನ ಪ್ರಾರ್ಥನೆ, ಪುಷ್ಪ ಸಮರ್ಪಣೆ, ನುಡಿ ನಮನಗಳ ಮೂಲಕ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅವರ ಆಯೋಜನೆಯಲ್ಲಿ ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಶೋಕ ಮಾತಾ ಚರ್ಚಿನ ಆಶ್ರಯದಲ್ಲಿ ಗುರುವಾರ ನಡೆಯಿತು.
ಚರ್ಚಿನ ಧರ್ಮ ಗುರುಗಳಾದ ಅತೀ ವಂದನೀಯ ಫಾ.ವಲೇರಿಯನ್ ಮೆಂಡೊನ್ಸಾ ಅವರು, ಡಾ.ಶಿವಕುಮಾರ ಸ್ವಾಮೀಜಿವರು 111 ವರ್ಷಗಳ ತಮ್ಮ ಜೀವಿತಾವದಿಯಲ್ಲಿ ಕೈಗೊಂಡ ತ್ರಿವಿಧ ದಾಸೋಹಗಳ ಬಗ್ಗೆ ಉಲ್ಲೇಖಿಸಿ ನುಡಿ ನಮನ ಸಲ್ಲಿಸಿದರು.
ಶಾಲೆಯ ಸಹ ಶಿಕ್ಷಕರಾದ ಶ್ರೀ ಪ್ರಭಾಕರ್ ಶೆಟ್ಟಿ ಅವರು ಶಿವಕ್ಯರಾದ ಸ್ವಾಮೀಜಿ ಅವರು ಅಕ್ಷರ ದಾಸೋಹ, ಜ್ಞಾನ ದಾಸೋಹ, ಅನ್ನ ದಾಸೋಹಗಳ ಮೂಲಕ ಭಾರತ ದೇಶದಲ್ಲಿಯೆ ಹೆಸರಾದವರು. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿ ಇರುವುದನ್ನು ನೆನೆಪಿಸಿ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾಗಿಗಳಾದ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಮತ್ತು ಶಿಕ್ಷಕ ವರ್ಗದವರು ಸ್ವಾಮಿಜೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಪ್ರೌಢ ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ ಜೊಯ್ಲ್ ಡೇಸಾ, ಪ್ರಾಥಮಿಕ ಶಾಲಾ ಮುಖ್ಯೋಪದ್ಯಾಯರಾದ ಹೆರಾಲ್ಡ್ ಡಿಸೋಜ ಹಾಗೂ ಶಾಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.