ಮಾತೃಭೂಮಿ ಮತ್ತು ಮಾತೃಭಾಷೆಯನ್ನು ಬೆಳೆಸಿ: ಡಾ. ಹಿರೇಮಗಳೂರು ಕಣ್ಣನ್‌

ಕಾರ್ಕಳ: ಕನ್ನಡ ಭಾಷೆ ನೆಲ ಜಲವನ್ನು ಉತ್ತುಂಗಕ್ಕೇರಿಸಲು ಯುವ ಪೀಳಿಗೆ ಸನ್ನದ್ದವಾಗಿರಬೇಕು. ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಲು ನಾವು ಶ್ರಮಿಸಬೇಕು. ಪೂರ್ವಜರ ಆಸ್ತಿಯಾದ ಭಾಷೆ, ಕಲೆ, ಸಂಪತ್ತನ್ನು ವೃದ್ಧಿಸಬೇಕು. ದ್ವೇಷ ತ್ಯಜಿಸಿ ಸುಮನಸಿನವರಾಗಿ, ಹೆತ್ತವರನ್ನು ಪ್ರೀತಿಯಿಂದ ಸಲಹಿ, ಮಾತೃಭೂಮಿ ಮತ್ತು ಮಾತೃ ಭಾಷೆಯನ್ನು ಬೆಳೆಸಬೇಕು ಎಂದು ಡಾ. ಹಿರೇಮಗಳೂರು ಕಣ್ಣನ್‌ ಕರೆ ನೀಡಿದರು.

ಅವರು ಮಂಗಳವಾರದಂದು ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಕ್ರಿಯೇಟಿವ್‌ ನುಡಿಹಬ್ಬ-2022’ ಅನ್ನು ಉದ್ಘಾಟಿಸಿ ‘ನಿನಾದ’ ತ್ರೈಮಾಸಿಕ ಪತ್ರಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಆರೋಗ್ಯ ಪೂರ್ಣವಾದ ಮನಸ್ಸು ಪಡೆಯಲು ಕ್ರಿಯಾಶೀಲ ಚಟುವಟಿಕೆಗಳು ಪೂರಕ. ಸತ್ಯದ ಒಸರನ್ನು ಹುಡುಕುವ ಕಡೆಗೆ ಸದಾ ಮನಸ್ಸು ತುಡಿಯುತ್ತಿರಲಿ ಎಂದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್‌ ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಬಿ ರಾವ್‌ ಅವರ ‘ಬೊಂಬಿನ ಬೇಲಿ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದೆಡೆಗೆ ಮತ್ತು ಮೌಲ್ಯಯುತ ವಿಚಾರಗಳನ್ನು ತಿಳಿಯಲು ಆಸಕ್ತರಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕರಲ್ಲೊಬ್ಬರಾದ ಅಮೃತ್‌ ರೈ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಾಹಿತ್ಯ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಎಲ್ಲ ಕಡೆ ನಡೆಯುವಂತಾಗಲಿ ಎಂದರು.

ಸಂಸ್ಥಾಪಕ ಡಾ ಗಣನಾಥ ಶೆಟ್ಟಿ, ಆದರ್ಶ ಎಂ ಕೆ, ವಿಮಲ್‌ ರಾಜ್‌, ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಉಡುಪಿಯ ಪ್ರಾಂಶುಪಾಲ ಸ್ಟಾನಿ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥಾಪಕ ಅಶ್ವಥ್‌ ಎಸ್‌ ಎಲ್‌ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ವಿನಾಯಕ ಜೋಗ್‌ ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು. ಲೋಹಿತ್‌ ಎಸ್‌ ಕೆ ವಂದಿಸಿದರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.