ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆ ಸಮಾರೋಪ ಸಮಾರಂಭ

ಕುಂದಾಪುರ: ವಿದ್ಯಾರ್ಥಿಗಳಲ್ಲಿನ ಕಲೆ-ಸಾಹಿತ್ಯದ ಕುರಿತಾದ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪ್ರತಿಭಾ ದಿನಾಚರಣೆಯ ಉದ್ದೇಶ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸ್ಪರ್ಧೆ- ಬಹುಮಾನಕ್ಕೆ ಸೀಮಿತವಾಗಿರಿಸದೆ, ಕಲೆಯಲ್ಲೇ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೀರ್ಪುಗಾರರಾದ ಭಂಡಾರ್‍ಕಾರ್ಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಯಶವಂತಿ ಕೆ., ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅನಿಸಿಕೆಯ ನುಡಿಗಳನ್ನಾಡಿದರು. ಈ ಸಂದರ್ಭ ಕಾಲೇಜಿನ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ ಉಪಸ್ಥಿತರಿದ್ದರು.

ತೃತೀಯ ಬಿ.ಕಾಂ. ‘ಎ’ ಸಮಗ್ರ ಪ್ರಥಮ ಪ್ರಶಸ್ತಿಯನ್ನು, ಬಿ.ಎಸ್ಸಿ ಮತ್ತು ಬಿ.ಸಿ.ಎ. ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ತೃತೀಯ ಬಿ.ಕಾಂ. ‘ಎ’ನ ಪುಷ್ಪರಾಣಿ ‘ಉತ್ತಮ ನಿರೂಪಕಿ’ಯಾಗಿ, ಮಂಜುನಾಥ್ ‘ಉತ್ತಮ ವೈಯಕ್ತಿಕ ಪ್ರತಿಭೆ’ಯಾಗಿ ಹೊರ ಹೊಮ್ಮಿದರು.

ವಾಣಿಜ್ಯ ಉಪನ್ಯಾಸಕಿ ವೀಣಾ ಭಟ್ ಸ್ವಾಗತಿಸಿದರು. ಪ್ರಥ್ವಿಶ್ರೀ ಜಿ. ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು. ಪ್ರೀತಿ ಹೆಗ್ಡೆ ವಂದಿಸಿ, ಯೋಗೀಶ್ ಶ್ಯಾನುಬೊಗ್ ನಿರೂಪಿಸಿದರು.