ಉಡುಪಿ: ವಿವಾದಿತ ಸ್ಥಳದಲ್ಲಿ ನಿರ್ಮಾಣ ಆಗುತ್ತಿರುವ ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಪೇಜಾವರ ಮಠ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸಿದ್ದರಾಮಯ್ಯನವರ ದೇಶನಿಷ್ಠೆಯ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ನಾವು ಯಾರಿಗೂ ದೇಣಿಗೆ ನೀಡಿ ಎಂದು ಒತ್ತಾಯ ಮಾಡಿಲ್ಲ. ವಿಶ್ವದಾದ್ಯಂತ ದೇಣಿಗೆ ಕೊಡುವವರು ಸಂತೋಷದಿಂದ ಕೊಡುತ್ತಿದ್ದಾರೆ. ನೀವು ವಿವಾದಿತ ಸ್ಥಳ ಎನ್ನುತ್ತಿದ್ದೀರಿ. ಹಾಗಾದ್ರೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಒಪ್ಪುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಸ್ವಾಮೀಜಿ, ದಾಖಲೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ಅವರು ಮಾಡಿರುವ ಆರೋಪಕ್ಕೆ ಒಂದು ಸಣ್ಣ ದಾಖಲೆಯನ್ನು ಕೊಟ್ಟರೂ ಬೆಲೆ ಇರುತ್ತದೆ. ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಇಂತಹ ಹೇಳಿಕೆ ನೀಡುವಾಗ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಎಂದರು.
ನಿರೀಕ್ಷೆ ಮೀರಿ ಭಕ್ತರು ರಾಮಮಂದಿರಕ್ಕೆ ದೇಣಿಗೆಯನ್ನು ಕೊಡುತ್ತಿದ್ದಾರೆ. ಇಷ್ಟೆಲ್ಲ ಜನ ಮುಂದೆ ಬಂದು ದೇಣಿಗೆ ನೀಡುತ್ತಿರುವಾಗ, ಒತ್ತಾಯ ಪೂರ್ವಕವಾಗಿ ದೇಣಿಗೆ ಸಂಗ್ರಹಿಸುವ ಪ್ರಶ್ನೆಯ ಬರುವುದಿಲ್ಲ. ಈ ಹೇಳಿಕೆಯಿಂದ ದೇಶದ ಜನಕ್ಕೆ ಕುಮಾರಸ್ವಾಮಿ ಅವರ ವ್ಯಕ್ತಿತ್ವದ ಮೇಲೆ ಸಂಶಯ ಬರುತ್ತದೆ. ಹೊರತು ನಮ್ಮ ಸಂಸ್ಥೆಯ ಮೇಲೆ ಸಂಶಯ ಬರುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.