ಕುಂದಾಪುರ: ಜಿಲ್ಲೆಯನ್ನೇ ತಲ್ಲಣಗೊಳಿಸಿದ ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೇದೆಗಳನ್ನು ಬಂಧಿsಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.
ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಬಂಧಿತ ಆರೋಪಿಗಳು. ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಕೊಲೆಗಾರರಿಗೆ ಸಕಲ ವ್ಯವಸ್ಥೆ ಮಾಡಿದ್ದರು:
ಪವನ್ ಅಮಿನ್ ಹಾಗೂ ವೀರೇಂದ್ರ ಆಚಾರ್ಯ ಜೋಡಿ ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳೊಂದಿಗೆ ಒಡನಾಟ ಹೊಂದಿದ್ದರು. ಕೊಲೆ ನಡೆದ ರಾತ್ರಿ ಆರೋಪಿಗಳು ತಲೆಮರೆಸಿಕೊಳ್ಳಲು ಪವನ್ ಅಮಿನ್ ಹೆಬ್ರಿಯ ಕಚ್ಚೂರಿನಲ್ಲಿರುವ ತನ್ನ ಮನೆಯಲ್ಲಿ ಅವಕಾಶ ಕಲ್ಪಿಸಿದ್ದನು. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ಹರೀಶ್ ರೆಡ್ಡಿಗೆ ಮೊಬೈಲ್ ಫೋನ್, ಸಿಮ್ ಸೇರಿದಂತೆ ಪ್ರಮುಖ ಸಾಮಾಗ್ರಿಗಳನ್ನು ಪ್ರಣವ್ ಭಟ್ ಮೂಲಕ ಕಳುಹಿಸಿಕೊಟ್ಟಿದ್ದನು. ಅಲ್ಲದೇ ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಕೊಲೆ ಆರೋಪಿಗಳಿಗೆ ಕಾರು ವ್ಯವಸ್ಥೆ ಮಾಡಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.
ಪವನ್ ಹಾಗೂ ವೀರೇಂದ್ರ ಈರ್ವರನ್ನು ಭಾನುವಾರ ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇಬ್ಬರಿಗೂ ಫೆಬ್ರವರಿ ೧೫ರತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.