ಈ ವರ್ಷದ ಕೊನೆಯ ಖಂಡಗ್ರಾಸ ಸೂರ್ಯ ಮತ್ತು ಚಂದ್ರಗ್ರಹಣ ಕಾಲದ ಫಲಾಫಲಗಳು

ಸೂರ್ಯ ಮತ್ತು ಚಂದ್ರಗ್ರಹಣಗಳು ಸರ್ವೇ ಸಾಮಾನ್ಯ ಖಗೋಳ ವಿದ್ಯಮಾನಗಳಾಗಿದ್ದು, ಗ್ರಹಣದ ಬಗ್ಗೆ ಅನವಶ್ಯಕ ಭಯ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯ ಮತ್ತು ಚಂದ್ರಗ್ರಹಣಗಳು ಕೆಲವು ನಕ್ಷತ್ರ ಮತ್ತು ರಾಶಿಗಳವರಿಗೆ ಕೆಟ್ಟ ಫಲಗಳನ್ನು ನೀಡಬಹುದು. ಆದಾಗ್ಯೂ, ಈ ಬಗ್ಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಇಷ್ಟದೇವತಾ ಆರಾಧನೆಯಿಂದ ಸರ್ವಕಷ್ಟಗಳನ್ನೂ ಪರಿಹರಿಸಿಕೊಳ್ಳಬಹುದು.

ಅ.25 ರಂದು ಸ್ವಾತಿ ನಕ್ಷತ್ರದಲ್ಲಿ ಸೂರ್ಯನಿಗೆ ಕೇತು ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಸ್ವಾತಿ, ಚಿತ್ರಾ, ವಿಶಾಖಾ, ಆರ್ದ್ರಾ, ಶತಭಿಷಾ ನಕ್ಷತ್ರದವರಿಗೂ ತುಲಾ, ಮೀನ, ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರಿಗೆ ಕೆಟ್ಟಫಲಗಳನ್ನು ನೀಡಲಿವೆ.

ನ. 8 ರಂದು ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣವು ನಡೆಯಲಿದ್ದು, ಭರಣಿ, ಪೂರ್ವಫಲ್ಗುಣಿ(ಉತ್ತರಾ), ಪೂರ್ವಾಷಾಢ, ಅಶ್ವಿನಿ, ಕೃತಿಕಾ ನಕ್ಷತ್ರದವರಿಗೂ ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಯವರಿಗೆ ಕೆಟ್ಟಫಲಗಳನ್ನು ನೀಡಲಿವೆ.

ಗ್ರಹಣಕಾಲದಲ್ಲಿ ಮಾಡಬಾರದ ಮತ್ತು ಮಾಡಬಹುದಾದ ಕಾರ್ಯಗಳು

  • ಗ್ರಹಣಕಾಲದಲ್ಲಿ ಪ್ರಮುಖವಾದ ಕೆಲಸಗಳನ್ನು ಮಾಡದಿರುವುದು ಒಳಿತು.
  • ಈ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಹೊರಗೆ ಹೋಗದಂತೆ ಸಲಹೆ ನೀಡಲಾಗುತ್ತದೆ, ಏಕೆಂದರೆ ಇದು ಮಗುವಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ.
  • ಸೂರ್ಯಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಗ್ರಹಣ ಬಿಟ್ಟ ನಂತರ, ಸ್ನಾನವಾದ ಬಳಿಕ ಹೊಸದಾಗಿ ಬೇಯಿಸಿದ ಆಹಾರ ಸೇವಿಸಿದರೆ ಒಳಿತು.
  • ಗ್ರಹಣ ಮೋಕ್ಷ ಕಾಲದಲ್ಲಿ ಸ್ನಾನ, ದಾನ, ಮಂತ್ರ ಪಠಣ, ಧ್ಯಾನ, ಹವನ ಮುಂತಾದ ಮಂಗಳ ಕಾರ್ಯಗಳನ್ನು ಮಾಡಬಹುದು.
  • ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯ ದೇವರನ್ನು ಪೂಜಿಸಿದಲ್ಲಿ ಶ್ರೇಯಸ್ಸು. ಆದಿತ್ಯ ಹೃದಯ ಸ್ತೋತ್ರ, ಸೂರ್ಯಾಷ್ಟಕ ಸ್ತೋತ್ರ, ಮೃತ್ಯುಂಜಯ ಜಾಪ, ವಿಷ್ಣು ಸ್ತೋತ್ರವನ್ನು ಪಠಿಸಬಹುದು.
  • ಗ್ರಹಣದ ಸಮಯದಲ್ಲಿ ಬೇಯಿಸಿದ ಆಹಾರ ಮತ್ತು ಕತ್ತರಿಸಿದ ತರಕಾರಿಗಳು ಕಲುಷಿತವಾಗುತ್ತವೆ ಆದುದರಿಂದ ಈ ಕಾಲದಲ್ಲಿ ಆಹಾರ ಸೇವನೆ ನಿಷಿದ್ದ. ಮನೆಯಲ್ಲಿ ಇರಬಹುದಾದ ಆಹಾರದ ಮೇಲೆ ಎಳ್ಳು ಅಥವಾ ಗರಿಕೆ ಹುಲ್ಲನ್ನು ಇಡಬಹುದು.
  • ಗ್ರಹಣದ ಸಮಯದಲ್ಲಿ ಮತ್ತು ಗ್ರಹಣದ ಅಂತ್ಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಅಸ್ವಸ್ಥರು, ವೃದ್ಧರು ಅಥವಾ ಗರ್ಭಿಣಿಯರು ಮತ್ತು ಮಕ್ಕಳಿಗೆ ಯಾವುದೇ ನಿಷೇಧವಿಲ್ಲ.