ಸೂರ್ಯ ಮತ್ತು ಚಂದ್ರಗ್ರಹಣಗಳು ಸರ್ವೇ ಸಾಮಾನ್ಯ ಖಗೋಳ ವಿದ್ಯಮಾನಗಳಾಗಿದ್ದು, ಗ್ರಹಣದ ಬಗ್ಗೆ ಅನವಶ್ಯಕ ಭಯ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯ ಮತ್ತು ಚಂದ್ರಗ್ರಹಣಗಳು ಕೆಲವು ನಕ್ಷತ್ರ ಮತ್ತು ರಾಶಿಗಳವರಿಗೆ ಕೆಟ್ಟ ಫಲಗಳನ್ನು ನೀಡಬಹುದು. ಆದಾಗ್ಯೂ, ಈ ಬಗ್ಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಇಷ್ಟದೇವತಾ ಆರಾಧನೆಯಿಂದ ಸರ್ವಕಷ್ಟಗಳನ್ನೂ ಪರಿಹರಿಸಿಕೊಳ್ಳಬಹುದು.
ಅ.25 ರಂದು ಸ್ವಾತಿ ನಕ್ಷತ್ರದಲ್ಲಿ ಸೂರ್ಯನಿಗೆ ಕೇತು ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಸ್ವಾತಿ, ಚಿತ್ರಾ, ವಿಶಾಖಾ, ಆರ್ದ್ರಾ, ಶತಭಿಷಾ ನಕ್ಷತ್ರದವರಿಗೂ ತುಲಾ, ಮೀನ, ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರಿಗೆ ಕೆಟ್ಟಫಲಗಳನ್ನು ನೀಡಲಿವೆ.
ನ. 8 ರಂದು ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣವು ನಡೆಯಲಿದ್ದು, ಭರಣಿ, ಪೂರ್ವಫಲ್ಗುಣಿ(ಉತ್ತರಾ), ಪೂರ್ವಾಷಾಢ, ಅಶ್ವಿನಿ, ಕೃತಿಕಾ ನಕ್ಷತ್ರದವರಿಗೂ ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಯವರಿಗೆ ಕೆಟ್ಟಫಲಗಳನ್ನು ನೀಡಲಿವೆ.
ಗ್ರಹಣಕಾಲದಲ್ಲಿ ಮಾಡಬಾರದ ಮತ್ತು ಮಾಡಬಹುದಾದ ಕಾರ್ಯಗಳು
- ಗ್ರಹಣಕಾಲದಲ್ಲಿ ಪ್ರಮುಖವಾದ ಕೆಲಸಗಳನ್ನು ಮಾಡದಿರುವುದು ಒಳಿತು.
- ಈ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಹೊರಗೆ ಹೋಗದಂತೆ ಸಲಹೆ ನೀಡಲಾಗುತ್ತದೆ, ಏಕೆಂದರೆ ಇದು ಮಗುವಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ.
- ಸೂರ್ಯಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಗ್ರಹಣ ಬಿಟ್ಟ ನಂತರ, ಸ್ನಾನವಾದ ಬಳಿಕ ಹೊಸದಾಗಿ ಬೇಯಿಸಿದ ಆಹಾರ ಸೇವಿಸಿದರೆ ಒಳಿತು.
- ಗ್ರಹಣ ಮೋಕ್ಷ ಕಾಲದಲ್ಲಿ ಸ್ನಾನ, ದಾನ, ಮಂತ್ರ ಪಠಣ, ಧ್ಯಾನ, ಹವನ ಮುಂತಾದ ಮಂಗಳ ಕಾರ್ಯಗಳನ್ನು ಮಾಡಬಹುದು.
- ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯ ದೇವರನ್ನು ಪೂಜಿಸಿದಲ್ಲಿ ಶ್ರೇಯಸ್ಸು. ಆದಿತ್ಯ ಹೃದಯ ಸ್ತೋತ್ರ, ಸೂರ್ಯಾಷ್ಟಕ ಸ್ತೋತ್ರ, ಮೃತ್ಯುಂಜಯ ಜಾಪ, ವಿಷ್ಣು ಸ್ತೋತ್ರವನ್ನು ಪಠಿಸಬಹುದು.
- ಗ್ರಹಣದ ಸಮಯದಲ್ಲಿ ಬೇಯಿಸಿದ ಆಹಾರ ಮತ್ತು ಕತ್ತರಿಸಿದ ತರಕಾರಿಗಳು ಕಲುಷಿತವಾಗುತ್ತವೆ ಆದುದರಿಂದ ಈ ಕಾಲದಲ್ಲಿ ಆಹಾರ ಸೇವನೆ ನಿಷಿದ್ದ. ಮನೆಯಲ್ಲಿ ಇರಬಹುದಾದ ಆಹಾರದ ಮೇಲೆ ಎಳ್ಳು ಅಥವಾ ಗರಿಕೆ ಹುಲ್ಲನ್ನು ಇಡಬಹುದು.
- ಗ್ರಹಣದ ಸಮಯದಲ್ಲಿ ಮತ್ತು ಗ್ರಹಣದ ಅಂತ್ಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಅಸ್ವಸ್ಥರು, ವೃದ್ಧರು ಅಥವಾ ಗರ್ಭಿಣಿಯರು ಮತ್ತು ಮಕ್ಕಳಿಗೆ ಯಾವುದೇ ನಿಷೇಧವಿಲ್ಲ.