ಉಡುಪಿ: ಶತಾಯುಷಿ ಡೋಲು ಕಲಾವಿದ ಗುರುವ ಕೊರಗ ಇನ್ನಿಲ್ಲ

ಉಡುಪಿ: ಶತಾಯುಷಿ ಡೋಲು (ಕಡ್ಡಾಯಿ) ಕಲಾವಿದ ಗುರುವ ಕೊರಗ (105) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನ ಹೊಂದಿದರು.

ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ 105 ವರ್ಷ ವಯಸ್ಸಿನ ಗುರುವ ಕೊರಗ ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ. ಡೋಲು ಕಲಾವಿದ ಹಿರಿಯಡ್ಕದ ತೋಮ ಮತ್ತು ತುಂಬೆ ದಂಪತಿ ಪುತ್ರರಾಗಿರುವ ಇವರು, 12ನೆ ವಯಸ್ಸಿನಿಂದಲೂ ಡೋಲು ಬಾರಿಸುವುದು ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಇವರ ಸಾಧನೆಗೆ 2018ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2017ನೆ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಕೂಡ ಲಭಿಸಿದೆ. ಅಲ್ಲದೆ ಹಲವು ಗೌರವ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದಾರೆ. ಕೊರಗ ಸಮುದಾಯಕ್ಕೆ ಪ್ರಪ್ರಥಮ ರಾಜ್ಯೋತ್ಸವ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಯೂ ಇವರಿಗೆ ಸಲ್ಲುತ್ತದೆ.