ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತಾ? ಇಲ್ಲಿದೆ ಆಶ್ಚರ್ಯಕರ ಸಂಗತಿ

ಬೈಕ್ ಸವಾರಿ ಮಾಡುವ ಪ್ರತಿಯೊಬ್ಬರಿಗೂ ಹೆಲ್ಮೆಟ್ ಅನಿವಾರ್ಯ. ಆದರೆ ಹಲವರಲ್ಲಿ ಒಂದು ಸಾಮಾನ್ಯ ಪ್ರಶ್ನೆ — “ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆಯಾ?” ಎಂಬುದು. ಈ ಬಗ್ಗೆ ಸಾಕಷ್ಟು ಮಿಥ್ಯೆಗಳು ಹರಿದಾಡುತ್ತಿವೆ. ಅನೇಕರು ಕೂದಲು ಉದುರುವಿಕೆಯ ಹೆದರಿಕೆಯಿಂದ ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡಿ ಪ್ರಾಣಾಪಾಯ ತಂದುಕೊಮಡವರಿದ್ದಾರೆ. ಹಾಗಾದರೆ ನಿಜ ವಿಷಯವೇನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ.

ಹೆಲ್ಮೆಟ್‌ನಿಂದ ನೇರವಾಗಿ ಕೂದಲು ಉದುರುವುದಿಲ್ಲ

ತಜ್ಞರ ಪ್ರಕಾರ, ಹೆಲ್ಮೆಟ್ ಧರಿಸುವುದರಿಂದ ನೇರವಾಗಿ ಕೂದಲು ಉದುರುವುದಿಲ್ಲ. ಆದರೆ ಕೆಲವು ಪರಿಸ್ಥಿತಿಗಳು ಕೂದಲಿನ ಆರೋಗ್ಯಕ್ಕೆ ಪರಿಣಾಮ ಬೀರುತ್ತವೆ.

ಹೆಲ್ಮೆಟ್ ಬಳಕೆಯಿಂದ ಕೂದಲಿಗೆ ಆಗಬಹುದಾದ ಸಮಸ್ಯೆಗಳು

  • ಬೆವರು ಮತ್ತು ತೇವಾಂಶ: ಹೆಲ್ಮೆಟ್ ಒಳಗೆ ಹೆಚ್ಚು ಬೆವರು ಬಂದರೆ ತಲೆ ಚರ್ಮ ಒದ್ದೆಯಾಗುತ್ತದೆ. ಇದರಿಂದ Dandruff ಅಥವಾ ಇತರ ಚರ್ಮದ ಸಮಸ್ಯೆಗಳು ಉಂಟಾಗಬಹುದು.
  • ಗಾಳಿಯ ಹರಿವು ಕಡಿಮೆ: ದೀರ್ಘ ಸಮಯ ಹೆಲ್ಮೆಟ್ ಧರಿಸುವ ಸಂದರ್ಭದಲ್ಲಿ ವೆಂಟಿಲೇಶನ್ ಕಡಿಮೆ ಇದ್ದರೆ ತಲೆ ಚರ್ಮಕ್ಕೆ ತೊಂದರೆ ಆಗಬಹುದು.
  • ಘರ್ಷಣೆ (Friction): ತುಂಬಾ ಟೈಟ್ ಹೆಲ್ಮೆಟ್ ಕೂದಲಿನ ಬೇರುಗಳಿಗೆ ಒತ್ತಡ ನೀಡಿ ಕೂದಲು ತುಂಡಾಗಬಹುದು.
  • ಸ್ವಚ್ಛತೆ ಕೊರತೆ: ಹೆಲ್ಮೆಟ್ ಒಳಭಾಗ ಕ್ಲೀನ್ ಮಾಡದಿದ್ದರೆ ಬ್ಯಾಕ್ಟೀರಿಯಾ ಬೆಳೆಯಬಹುದು.

ಹಾಗಿದ್ರೆ ಕೂದಲು ಉದುರುವ ನಿಜವಾದ ಕಾರಣಗಳು

  • ಅನುವಂಶೀಯತೆ (Genetics)
  • ಹಾರ್ಮೋನ್ ಅಸಮತೋಲನ
  • ಮಾನಸಿಕ ಒತ್ತಡ (Stress)
  • ಪೋಷಕಾಂಶಗಳ ಕೊರತೆ
  • ತಲೆ ಚರ್ಮದ ಸಮಸ್ಯೆಗಳು

ಕೂದಲನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು?

  • ಸರಿಯಾದ ಅಳತೆ ಮತ್ತು ವೆಂಟಿಲೇಶನ್ ಇರುವ ಹೆಲ್ಮೆಟ್ ಬಳಸಿ
  • ಹೆಲ್ಮೆಟ್ ಒಳಗೆ ಕಾಟನ್ ಕ್ಯಾಪ್ ಅಥವಾ ಸ್ಕಾರ್ಫ್ ಧರಿಸಿ
  • ಹೆಲ್ಮೆಟ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ
  • ತಲೆ ಚರ್ಮವನ್ನು ಒಣವಾಗಿಡಿ
  • ವಾರಕ್ಕೆ 2–3 ಬಾರಿ ಕೂದಲು ತೊಳೆಯಿರಿ

ಹೆಲ್ಮೆಟ್ ನಮ್ಮ ಜೀವವನ್ನು ರಕ್ಷಿಸುವ ಪ್ರಮುಖ ಸಾಧನ. ಕೂದಲು ಉದುರುವ ಭಯದಿಂದ ಅದನ್ನು ಧರಿಸದೇ ಇರೋದು ಅಪಾಯಕಾರಿ. ಸರಿಯಾದ ಕಾಳಜಿ ತೆಗೆದುಕೊಂಡರೆ ಕೂದಲು ಮತ್ತು ಸುರಕ್ಷತೆ ಎರಡನ್ನೂ ಕಾಪಾಡಿಕೊಳ್ಳಬಹುದು.