ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 187 ನಾಣ್ಯಗಳು: ತಬ್ಬಿಬ್ಬಾದ ವೈದ್ಯರು

ಬಾಗಲಕೋಟೆ: ಇಲ್ಲಿ ವ್ಯಕ್ತಿಯೊಬ್ಬರು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಆತನ ಹೊಟ್ಟೆಯೊಳಗೆ ನಾಣ್ಯಗಳನ್ನು ಕಂಡು ವೈದ್ಯರು ತಬ್ಬಿಬ್ಬಾಗಿದ್ದಾರೆ. ಹಾನಗಲ್ ನ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ವ್ಯಕ್ತಿಯ ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಗುವ ಸಮಸ್ಯೆ ಏನೆಂಬುದನ್ನು ಹುಡುಕುತ್ತಿದ್ದಾಗ ಆತನ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಪತ್ತೆಯಾಗಿದೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈತ ಕಳೆದ 2-3 ತಿಂಗಳಿಂದ ನಾಣ್ಯಗಳನ್ನು ನುಂಗುತ್ತಿದ್ದ. ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಬಂದಿದ್ದ ಎಂದು ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಲ್ಲಿ ಒಬ್ಬರಾದ ಡಾ.ಈಶ್ವರ ಕಲಬುರ್ಗಿ ತಿಳಿಸಿದ್ದಾರೆ.

ವೈದ್ಯಾಧಿಕಾರಿಗಳು ವ್ಯಕ್ತಿಯ ಎಕ್ಸ್-ರೇ ಮಾಡಿ ಎಂಡೋಸ್ಕೋಪಿ ಮಾಡಿದಾಗ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಪತ್ತೆಯಾಗಿದೆ. ರೋಗಿಯು ಒಟ್ಟು 187 ನಾಣ್ಯಗಳನ್ನು ನುಂಗಿದ್ದಾನೆ. ಇದರಲ್ಲಿ ರೂ 5 ರ 56 ನಾಣ್ಯಗಳು, ರೂ 2 ರ 51 ಮತ್ತು ರೂ 1 ರ 80 ನಾಣ್ಯಗಳು ಸೇರಿವೆ.

ಮಾನಸಿಕ ಕಾಯಿಲೆ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ನಿವಾಸಿ ದ್ಯಾಮಪ್ಪ ಹರಿಜನ ಎಂಬ ವ್ಯಕ್ತಿಯು ಎರಡು ಮೂರು ತಿಂಗಳ ಅವಧಿಯಲ್ಲಿ ಒಟ್ಟು 1.5 ಕಿಲೋಗ್ರಾಂ ತೂಕದ ವಿವಿಧ ಮುಖಬೆಲೆಯ ನಾಣ್ಯಗಳನ್ನು ನುಂಗಿದ್ದನು. ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಎಲ್ಲ ನಾಣ್ಯಗಳನ್ನು ಹೊರತೆಗಿದಿದ್ದು ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.