ಭಾರತದಲ್ಲಿ ಹೆಚ್ಚಿನ ಜನರು ದಿನವನ್ನು ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರಿಗೆ ಬೆಳಿಗ್ಗೆ ಟೀ ಕುಡಿಯದೇ ದಿನವೇ ಶುರುವಾಗುವುದಿಲ್ಲ. ಇದೇ ರೀತಿ, ಕೆಲವರು ಊಟದ ನಂತರವೂ ಒಂದು ಕಪ್ ಚಹಾ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಊಟವಾದ ತಕ್ಷಣ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಇಲ್ಲಿದೆ ಮಹಿತಿ.
ಹಲವು ತಜ್ಞ ವೈದ್ಯರ ಪ್ರಕಾರ, ಊಟದ ತಕ್ಷಣ ಚಹಾ ಸೇವಿಸುವುದು ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳು ಇರುತ್ತವೆ. ಮತ್ತೊಂದೆಡೆ, ಚಹಾದಲ್ಲಿ ಟ್ಯಾನಿನ್ಗಳು (Tannins) ಮತ್ತು ಪಾಲಿಫಿನಾಲ್ಗಳು (Polyphenols) ಎಂಬ ನೈಸರ್ಗಿಕ ಸಂಯುಕ್ತಗಳಿರುತ್ತವೆ.
ಊಟವಾದ ತಕ್ಷಣ ಚಹಾ ಕುಡಿದಾಗ, ಈ ಟ್ಯಾನಿನ್ಗಳು ಆಹಾರದಲ್ಲಿರುವ ಕಬ್ಬಿಣಾಂಶದೊಂದಿಗೆ ಸೇರಿ ಅದರ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪೂರ್ಣ ಪ್ರಮಾಣದಲ್ಲಿ ದೊರೆಯದಿರಬಹುದು.

ಇದರ ಜೊತೆಗೆ, ಊಟದ ಬಳಿಕ ತಕ್ಷಣ ಚಹಾ ಕುಡಿಯುವುದರಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಅಜೀರ್ಣ ಅಥವಾ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಚಹಾ ಮತ್ತು ಕಾಫಿ ಎರಡರಲ್ಲೂ ಕೆಫೀನ್ ಇರುವುದರಿಂದ, ವಿಶೇಷವಾಗಿ ರಾತ್ರಿ ಊಟದ ಬಳಿಕ ಸೇವಿಸಿದರೆ ನಿದ್ರೆಯ ಗುಣಮಟ್ಟಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ.
ತಜ್ಞರ ಸಲಹೆಯಂತೆ, ಊಟ ಮಾಡಿದ ಬಳಿಕ ಕನಿಷ್ಠ ಒಂದು ಗಂಟೆಯ ಅಂತರವಿಟ್ಟು ಚಹಾ ಅಥವಾ ಕಾಫಿ ಸೇವಿಸುವುದು ಉತ್ತಮ. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳಲು ನೆರವಾಗುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲಿನ ಪ್ರತಿಕೂಲ ಪರಿಣಾಮವನ್ನೂ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞವೈದ್ಯರು.

















