ರೈಲ್ವೆ ಇಲಾಖೆಯಲ್ಲಿಯೇ ನೌಕರಿ ಮಾಡುವ ಕನಸಿದೆಯಾ? ಹಾಗಾದ್ರೆ ಇಲ್ಲಿದೆ ನಿಮಗೆ ಅವಕಾಶ, 191 ಹುದ್ದೆಗಳ ನೇಮಕಾತಿ

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶವೊಂದು ಒದಗಿಬಂದಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ವಿವಿಧ ವಿಭಾಗಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ವಿಶೇಷವೆಂದರೆ, ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

RRB ಬಿಡುಗಡೆ ಮಾಡಿರುವ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ ಸಂಖ್ಯೆ CEN 09/2026ರ ಅಡಿಯಲ್ಲಿ ಒಟ್ಟು 191 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III (ಕೆಮಿಸ್ಟ್ ಆ್ಯಂಡ್ ಮೆಟಲರ್ಜಿಸ್ಟ್) ವಿಭಾಗದಲ್ಲಿ 36 ಹುದ್ದೆಗಳಿವೆ. 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದ ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯಗಳನ್ನು ಅಭ್ಯಾಸ ಮಾಡಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ?

ಒಟ್ಟು ಏಳು ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ ಹೀಗಿದೆ:

  • ಚೀಫ್ ಲಾ ಅಸಿಸ್ಟೆಂಟ್ – 17
  • ಪಬ್ಲಿಕ್ ಪ್ರಾಸಿಕ್ಯೂಟರ್ – 21
  • ಸೀನಿಯರ್ ಪಬ್ಲಿಸಿಟಿ ಇನ್‌ಸ್ಪೆಕ್ಟರ್ – 8
  • ಜೂನಿಯರ್ ಟ್ರಾನ್ಸ್‌ಲೇಟರ್ (ಹಿಂದಿ) – 79
  • ಸ್ಟಾಫ್ ಆ್ಯಂಡ್ ವೆಲ್ಫೇರ್ ಇನ್‌ಸ್ಪೆಕ್ಟರ್ – 27
  • ಸೈಂಟಿಫಿಕ್ ಅಸಿಸ್ಟೆಂಟ್ (ಟ್ರೈನಿಂಗ್) – 3
  • ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III (ಕೆಮಿಸ್ಟ್ ಆ್ಯಂಡ್ ಮೆಟಲರ್ಜಿಸ್ಟ್) – 36

ಈ ಪೈಕಿ ಪಿಯುಸಿ ವಿದ್ಯಾರ್ಹತೆಯೊಂದಿಗೆ ಅರ್ಜಿ ಸಲ್ಲಿಸಬಹುದಾದ ಹುದ್ದೆ ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III ಆಗಿದೆ. ಉಳಿದ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವಿ ಅಥವಾ ನಿರ್ದಿಷ್ಟ ವೃತ್ತಿಪರ ವಿದ್ಯಾರ್ಹತೆ ಅಗತ್ಯವಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಆಯಾ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು.

ವಿದ್ಯಾರ್ಹತೆ ಏನಿರಬೇಕು?

ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 12ನೇ ತರಗತಿ (+2) ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು.

ಕೇವಲ ಪಿಯುಸಿ ಉತ್ತೀರ್ಣರಾಗಿದ್ದರೆ ಸಾಲದು. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳನ್ನು ಓದಿರಬೇಕು. ಅಂತಿಮ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ಎಷ್ಟಿರಬೇಕು?

ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ವಯಸ್ಸನ್ನು 2027ರ ಜನವರಿ 1ರ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಹಾಗೂ ಇತರೆ ಹಿಂದುಳಿದ ವರ್ಗಗಳ (OBC-NCL) ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ವಿಕಲಚೇತನರು ಮತ್ತು ಮಾಜಿ ಸೈನಿಕರಿಗೆ ಅಧಿಸೂಚನೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ವೇತನ ಎಷ್ಟು ಸಿಗಲಿದೆ?

ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್‌ನ ಲೆವೆಲ್-2 ಅಡಿಯಲ್ಲಿ ವೇತನ ನೀಡಲಾಗುತ್ತದೆ. ಆರಂಭಿಕ ಮೂಲ ವೇತನ ತಿಂಗಳಿಗೆ ₹19,900 ಆಗಿದ್ದು, ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ಇತರ ಭತ್ಯೆಗಳೂ ದೊರೆಯಲಿವೆ.

ಈ ಹುದ್ದೆಗೆ B-1 ವೈದ್ಯಕೀಯ ಮಾನದಂಡ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ರೈಲ್ವೆ ಇಲಾಖೆಯ ವೈದ್ಯಕೀಯ ಪರೀಕ್ಷೆಯಲ್ಲಿ ನಿಗದಿತ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಎಷ್ಟು ಹುದ್ದೆಗಳಿವೆ?

ಅಧಿಸೂಚನೆಯ ವಲಯವಾರು ಹುದ್ದೆಗಳ ಪಟ್ಟಿಯ ಪ್ರಕಾರ, RRB ಬೆಂಗಳೂರು ವ್ಯಾಪ್ತಿಯ ದಕ್ಷಿಣ ಪಶ್ಚಿಮ ರೈಲ್ವೆ (SWR) ಅಡಿಯಲ್ಲಿ ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III ಹುದ್ದೆಗೆ ಒಟ್ಟು 2 ಹುದ್ದೆಗಳನ್ನು ಮೀಸಲಿಡಲಾಗಿದೆ.

ಇವುಗಳಲ್ಲಿ ಒಂದು ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಮತ್ತೊಂದು ಹುದ್ದೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿದೆ. ದೇಶದಾದ್ಯಂತ ಈ ವಿಭಾಗದಲ್ಲಿ ಒಟ್ಟು 36 ಹುದ್ದೆಗಳಿದ್ದು, ಉಳಿದ ಹುದ್ದೆಗಳನ್ನು ವಿವಿಧ ರೈಲ್ವೆ ವಲಯಗಳು ಮತ್ತು RRBಗಳ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ಈ ಹುದ್ದೆಗೆ ಸಂದರ್ಶನದ ಹಂತವನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಿಲ್ಲ.

CBT ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು, 90 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ ಒಟ್ಟು 100 ಅಂಕಗಳಿರುತ್ತವೆ. ತಪ್ಪು ಉತ್ತರಗಳಿಗೆ 1/3 ಅಂಕಗಳ ಋಣಾತ್ಮಕ ಮೌಲ್ಯಮಾಪನ ಇರಲಿದೆ.

ಪರೀಕ್ಷೆಯ ಪ್ರಶ್ನೆಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ.

  • ಪ್ರೊಫೆಷನಲ್ ಎಬಿಲಿಟಿ – 50 ಪ್ರಶ್ನೆಗಳು
  • ಸಾಮಾನ್ಯ ಜ್ಞಾನ – 15 ಪ್ರಶ್ನೆಗಳು
  • ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕ ಸಾಮರ್ಥ್ಯ – 15 ಪ್ರಶ್ನೆಗಳು
  • ಗಣಿತ – 10 ಪ್ರಶ್ನೆಗಳು
  • ಸಾಮಾನ್ಯ ವಿಜ್ಞಾನ – 10 ಪ್ರಶ್ನೆಗಳು

ವಿಶೇಷವೆಂದರೆ, ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಕನ್ನಡ ಸೇರಿದಂತೆ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಪರೀಕ್ಷೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಪರೀಕ್ಷೆಗೆ ಯಾವ ವಿಷಯಗಳನ್ನು ಓದಬೇಕು?

ಲ್ಯಾಬ್ ಅಸಿಸ್ಟೆಂಟ್ ಹುದ್ದೆಯ ಪ್ರೊಫೆಷನಲ್ ಎಬಿಲಿಟಿ ವಿಭಾಗಕ್ಕೆ ವಿಶೇಷ ಪಠ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮೆಕ್ಯಾನಿಕಲ್ ಟೆಸ್ಟಿಂಗ್‌ನ ಮೂಲಭೂತ ಅಂಶಗಳು, ಟೆನ್ಸೈಲ್ ಟೆಸ್ಟಿಂಗ್, ಇಂಪ್ಯಾಕ್ಟ್ ಟೆಸ್ಟಿಂಗ್, ಬೆಂಡ್ ಟೆಸ್ಟ್ ಹಾಗೂ ಪರೀಕ್ಷೆಗೆ ಬಳಸುವ ಉಪಕರಣಗಳು ಮತ್ತು ಯಂತ್ರಗಳ ಕುರಿತ ಪ್ರಶ್ನೆಗಳಿರುತ್ತವೆ.

ಇದರೊಂದಿಗೆ ಸ್ಟೀಲ್, ಕಾಸ್ಟ್ ಐರನ್, ನಾನ್-ಫೆರಸ್ ಲೋಹಗಳು, ರಬ್ಬರ್, ಪ್ಲಾಸ್ಟಿಕ್ ಮತ್ತು ಕಾಂಪೋಸಿಟ್ ವಸ್ತುಗಳ ಬಗ್ಗೆಯೂ ಪ್ರಶ್ನೆಗಳು ಇರಲಿವೆ.

ಲೋಹಗಳಲ್ಲಿನ ಕಾರ್ಬನ್, ಮ್ಯಾಂಗನೀಸ್, ಸಿಲಿಕಾನ್ ಸೇರಿದಂತೆ ವಿವಿಧ ಅಂಶಗಳ ಪರೀಕ್ಷೆ, ಎಲೆಕ್ಟ್ರೋಪ್ಲೇಟಿಂಗ್, ಪೇಂಟ್ ಟೆಸ್ಟಿಂಗ್, ರಬ್ಬರ್ ಉತ್ಪನ್ನಗಳ ಪರೀಕ್ಷೆ, ತೈಲ ಮತ್ತು ಲೂಬ್ರಿಕಂಟ್‌ಗಳ ಪರೀಕ್ಷೆ ಹಾಗೂ ಎಕ್ಸ್-ರೇ, ಗಾಮಾ ರೇ ಮತ್ತು ಅಲ್ಟ್ರಾಸಾನಿಕ್ ಟೆಸ್ಟಿಂಗ್‌ನಂತಹ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್ ವಿಷಯಗಳನ್ನೂ ಒಳಗೊಂಡಿದೆ.

ಈ ವಿಭಾಗಕ್ಕೆ ಒಟ್ಟು 50 ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯ 57ನೇ ಪುಟದಲ್ಲಿರುವ Annexure-XIII ಪಠ್ಯಕ್ರಮವನ್ನು ಆಧರಿಸಿ ಪರೀಕ್ಷೆಗೆ ಸಿದ್ಧತೆ ನಡೆಸಬಹುದು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. CBT ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಬ್ಯಾಂಕ್ ಶುಲ್ಕ ಕಡಿತಗೊಳಿಸಿ ₹400 ಮರುಪಾವತಿ ಮಾಡಲಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ವಿಕಲಚೇತನರು, ಮಹಿಳೆಯರು, ತೃತೀಯ ಲಿಂಗದವರು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ (EBC) ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ ಮೊತ್ತವನ್ನೂ CBT ಪರೀಕ್ಷೆಗೆ ಹಾಜರಾದ ಬಳಿಕ ಅನ್ವಯವಾಗುವ ಬ್ಯಾಂಕ್ ಶುಲ್ಕ ಕಡಿತಗೊಳಿಸಿ ಮರುಪಾವತಿಸಲಾಗುತ್ತದೆ.

ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, UPI ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಅರ್ಜಿ ಪೋರ್ಟಲ್ https://www.rrbapply.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

  1. ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಖಾತೆ ರಚಿಸಿಕೊಳ್ಳಬೇಕು.
  2. ಅಗತ್ಯವಿರುವ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಬೇಕು.
  3. ವಿದ್ಯಾರ್ಹತೆ ಮತ್ತು ಮೀಸಲಾತಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಬೇಕು.
  4. ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  5. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳು ಒಂದೇ RRB ಆಯ್ಕೆ ಮಾಡಿಕೊಂಡು, ತಮಗೆ ಅರ್ಹತೆ ಇರುವ ಹುದ್ದೆಗಳು ಮತ್ತು ರೈಲ್ವೆ ವಲಯಗಳಿಗೆ ಆದ್ಯತೆ ನೀಡಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅರ್ಜಿಗಳು ತಿರಸ್ಕೃತವಾಗುವ ಸಾಧ್ಯತೆಯಿದೆ.

ಅರ್ಜಿ ಸಲ್ಲಿಸುವಾಗ ಆಧಾರ್ ಅಥವಾ ಡಿಜಿಲಾಕರ್ ಮೂಲಕ ಗುರುತಿನ ದೃಢೀಕರಣ ಮಾಡಿಕೊಳ್ಳುವಂತೆ ಅಧಿಸೂಚನೆಯಲ್ಲಿ ಸಲಹೆ ನೀಡಲಾಗಿದೆ. ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ಸಕ್ರಿಯವಾಗಿರಬೇಕು.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಆರಂಭ: ನವೆಂಬರ್ 5, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 4, 2026 (ರಾತ್ರಿ 11.59)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಡಿಸೆಂಬರ್ 6, 2026
  • ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ: ಡಿಸೆಂಬರ್ 7ರಿಂದ 16ರವರೆಗೆ
  • ತಿದ್ದುಪಡಿ ಶುಲ್ಕ: ಪ್ರತಿ ತಿದ್ದುಪಡಿಗೆ ₹250

ಅರ್ಜಿ ಸಲ್ಲಿಸಿದ ಬಳಿಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದ್ದರೂ, ಖಾತೆ ರಚಿಸುವಾಗ ನಮೂದಿಸಿದ ವಿವರಗಳು ಮತ್ತು ಆಯ್ಕೆ ಮಾಡಿಕೊಂಡ RRB ಅನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

CBT ಪರೀಕ್ಷೆಯ ದಿನಾಂಕ, ಪರೀಕ್ಷಾ ಕೇಂದ್ರ, ದಾಖಲೆ ಪರಿಶೀಲನೆ ಹಾಗೂ ಇತರ ಹಂತಗಳ ವೇಳಾಪಟ್ಟಿಯನ್ನು ರೈಲ್ವೆ ನೇಮಕಾತಿ ಮಂಡಳಿ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವುದು ಸೂಕ್ತ.