ಮಂಡ್ಯ: ಹೆಗಲ ಮೇಲೆ ಕೈ ಹಾಕಿದ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಲೆಗೆ ಹೊಡೆದ ಘಟನೆ ಮಂಡ್ಯದಲ್ಲಿ ನಡೆದಿದ್ದು, ಇದೀಗ ಘಟನೆ ಕುರಿತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಡಿಕೆಶಿ ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶಿವಕುಮಾರ್ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಅಣ್ಣಾ ಎನ್ನುತ್ತಾ ಬಂದ ಕಾರ್ಯಕರ್ತನೊಬ್ಬ ಅವರ ಹೆಗಲ ಮೇಲೆ ಕೈ ಇಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ಡಿಕೆಶಿ ತಲೆಗೆ ಬಾರಿಸಿದ್ದಾರೆ. ಅಲ್ಲದೆ, ಆತನಿಗೆ ಬೈದಿದ್ದಾರೆ.
ಟ್ವೀಟ್ ಮೂಲಕ ಡಿಕೆಶಿಗೆ ಕುಟುಕಿದ ಬಿಜೆಪಿ:
ಈ ಘಟನೆಗೆ ರಾಜ್ಯ ಬಿಜೆಪಿ ಖಂಡನೆ ವ್ಯಕ್ತಪಡಿಸಿದ್ದು, ಡಿ.ಕೆ. ಶಿವಕುಮಾರ್ ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಮಾಧ್ಯಮಗಳ ಎದುರು ವ್ಯಕ್ತಿಗೆ ಹಲ್ಲೆ ನಡೆಸಿರುವುದು ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತದೆ. ಡಿಕೆಶಿ ಅವರೇ ನೀವು ರಾಜಕಾರಣಿಯೋ ಅಥವಾ ರೌಡಿಯೋ’ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ.