ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಖಾಸಗಿ ಹಾಗೂ ಸಿಟಿ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ.
ಮೂಡುಬಿದಿರೆಯಲ್ಲಿ ಗುರುವಾರ ನಡೆದ ಬಸ್ ಮಾಲೀಕರ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೆಎಸ್ಸಾರ್ಟಿಸಿ ಬಸ್ ಸಂಚಾರ:
ಗುರುವಾರ ದ.ಕ. ಜಿಲ್ಲೆಯಿಂದ ಮಂಗಳೂರು, ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಉಡುಪಿ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಿಗೆ 200ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ. ಜಿಲ್ಲಾ ವ್ಯಾಪ್ತಿಯೊಳಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಬಸ್ ಕಾರ್ಯಾಚರಣೆ ನಡೆಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮಂಗಳೂರು ನಗರದಲ್ಲಿ ನರ್ಮ್ ಬಸ್ ಕಾರ್ಯಾಚರಣೆ ನಡೆಸಿತು.
ಉಡುಪಿ: ಕೆಎಸ್ ಆರ್ ಟಿಸಿ ಬಸ್ ಗಳ ಹೆಚ್ಚಳ: ಉಡುಪಿಯಿಂದ ಗುರುವಾರ ಇನ್ನಷ್ಟು ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದೆ. ಬೆಂಗಳೂರಿಗೆ 20, ಕಾರ್ಕಳಕ್ಕೆ 8, ಕುಂದಾಪುರಕ್ಕೆ 9, ಮಂಗಳೂರಿಗೆ 6, ಶಿವಮೊಗ್ಗಕ್ಕೆ 4, ಶೀರೂರು-ಆಗುಂಬೆ, ಶೃಂಗೇರಿ ಬಾಳೆಹೊನ್ನೂರು, ಚಿಕ್ಕಮಗಳೂರಿಗೆ ಸಂಚರಿಸುತ್ತಿವೆ. ಹೆಬ್ರಿ ಭಾಗಕ್ಕೆ ನರ್ಮ್ ಬಸ್‌ಗಳು ಸಂಚರಿಸುತ್ತಿದ್ದು, ಸೋಮವಾರದಿಂದ ನಗರ ವ್ಯಾಪ್ತಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನರ್ಮ್ ಬಸ್‌ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ಚಿಂತನೆ ನಡೆದಿದೆ ಎನ್ನಲಾಗಿದೆ.