ದ.ಕ.ಜಿಲ್ಲೆ ಲಾಕ್ ಡೌನ್ ಸಡಿಲಿಕೆ: ಕಾರ್ಯಕ್ರಮಗಳು ನಿಷೇಧ; ರಾತ್ರಿ ‌7ರಿಂದ ಎಲ್ಲವೂ ಬಂದ್

ಮಂಗಳೂರು: ನಾಳೆ‌‌‌ಯಿಂದ ದ.ಕ ಜಿಲ್ಲೆಯಲ್ಲಿ ಬೆ.7 ರಿಂದ ರಾತ್ರಿ 7ರ ವರೆಗೆ ಲಾಕ್ ಡೌನ್ ಸಡಿಲಿಕೆ ಕುರಿತು‌ ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ‌.ರೂಪೇಶ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಆಟೋ ರಿಕ್ಷಾ, ಕ್ಯಾಬ್ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು,  ಆಟೋ ಮತ್ತು ಕ್ಯಾಬ್ ಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
ಖಾಸಗಿ ವಾಹನಗಳಾದ ಬೈಕ್ ಮತ್ತು ಕಾರುಗಳು ಸಂಚರಿಸಬಹುದಾಗಿದ್ದು, ಕಾರುಗಳಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಮತ್ತು ಬೈಕ್ ಗಳಲ್ಲಿ ಒಬ್ಬರಷ್ಟೇ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಸ್ಥಳೀಯ ಅಂಗಡಿಗಳು, ವಸತಿ ಸಂಕೀರ್ಣಗಳ ಶಾಪ್, ಸಣ್ಣಪುಟ್ಟ ಶಾಪ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಖಾಸಗಿ ಸಂಸ್ಥೆ ಮತ್ತು ಕಚೇರಿಗಳಲ್ಲಿ 33% ಸಿಬ್ಬಂದಿ ಬಳಸಿ ಕೆಲಸಕ್ಕೆ ಅನುಮತಿ‌ ಇದೆ.
ಹೊರಗಡೆಯ ಕಾರ್ಮಿಕರು ಬರುವಂತಿಲ್ಲ:
ಅಗತ್ಯ ಸೇವೆಗಳಿಗೆ ಇ-ಕಾಮರ್ಸ್ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅಗತ್ಯ ಕಟ್ಟಡ ಕಾಮಗಾರಿ ನಡೆಸಲು ಅವಕಾಶ, ಸ್ಥಳದಲ್ಲಿದ್ದ ಕಾರ್ಮಿಕರ ಬಳಕೆಗೆ ಸೂಚನೆ, ಹೊರಗಿನಿಂದ ಕಾರ್ಮಿಕರು ಬರುವಂತಿಲ್ಲ ಎಂದು ಆದೇಶದಲ್ಲಿದೆ.
ಮಾರುಕಟ್ಟೆ ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿ ಅಗತ್ಯ ವಸ್ತುಗಳ ಶಾಪ್ ತೆರೆಯಲಷ್ಟೇ ಅನುಮತಿ ನೀಡಲಾಗಿದೆ.
ಏನಿರೋದಿಲ್ಲ?:
ಹೊಟೇಲ್ ಬಾರ್, ರೆಸ್ಟೋರೆಂಟ್, ಮಾಲ್, ಸಿನಿಮಾ ಮಂದಿರ, ಜಿಮ್, ಕ್ರೀಡಾ ಸಂಕೀರ್ಣ, ಕ್ಲಬ್, ಸ್ವಿಮ್ಮಿಂಗ್ ಫೂಲ್, ಪಾರ್ಕ್, ಸೆಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಟೆಕ್ಸ್ ಟೈಲ್ಸ್ ಮತ್ತು ಬಟ್ಟೆ ಅಂಗಡಿಗಳು ಬಂದ್ ಇರುತ್ತವೆ.
ಕಾರ್ಯಕ್ರಮಗಳು ನಿಷೇಧ:
ಈ‌ ಲಾಕ್ ಡೌನ್ ಮಧ್ಯೆ ಜಿಲ್ಲೆಯಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇರಿ ಜನ ಸೇರುವ ಎಲ್ಲಾ ಕಾರ್ಯಕ್ರಮಗಳು ನಿಷೇಧ ಮಾಡಲಾಗಿದೆ. ರಾತ್ರಿ 7 ರಿಂದ ಬೆ.7ರ ವರೆಗೆ ಎಲ್ಲಾ ರೀತಿಯ ಸಂಚಾರ, ಸೇವೆ ಬಂದ್ ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.