ಅಮೇರಿಕಾದಲ್ಲಿ ಭಾರತದ ಚಿನ್ನದ ಹಕ್ಕಿ: ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಂಚುತ್ತಿದ್ದಾರೆ ನಮ್ಮ ಕುಡ್ಲದ ಕುವರಿ ದಿವಿತಾ ರೈ

71 ನೇ ವಾರ್ಷಿಕ ವಿಶ್ವ ಸುಂದರಿ ಜನವರಿ 14 ರಂದು ಅಮೇರಿಕಾದ ನ್ಯೂ ಓರ್ಲಿಯನ್ಸ್, ಲೂಯಿಸಿಯಾನದಲ್ಲಿರುವ ಅರ್ನೆಸ್ಟ್ ಎನ್. ಮೋರಿಯಲ್ ಕನ್ವೆನ್ಷನ್ ಸೆಂಟರ್‌ ನಲ್ಲಿ ನಡೆಯಲಿದ್ದು, 86 ಕ್ಕೂ ಹೆಚ್ಚು ಮಹಿಳೆಯರು ವಿಶ್ವ ಸುಂದರಿ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದಾರೆ. ಈಗಾಗಾಲೇ ಪೂರ್ವಾಭಾವಿ ಸುತ್ತುಗಳು ನಡೆಯುತ್ತಿದ್ದು, ಭಾರತದ ಪ್ರತಿನಿಧಿ ಮಿಸ್ ಯೂನಿವರ್ಸ್ ಇಂಡಿಯಾ ದಿವಿತಾ ರೈ ಕೂಡಾ ಸ್ಪರ್ಧೆಯಲ್ಲಿದ್ದಾರೆ.

ದಿವಿತಾ ರೈ ಕಾಸ್ಟೂಮ್ ವಿಭಾಗದಲ್ಲಿ ಬಂಗಾರವರ್ಣದ ‘ಚಿನ್ನದ ಹಕ್ಕಿ’ಯ ಉಡುಗೆ ತೊಟ್ಟಿದ್ದು, ಇದು ಭಾರತದ ಅಪಾರ ಸಂಪತ್ತನ್ನು ಪ್ರತಿನಿಧಿಸುವ ಉಡುಗೆಯಾಗಿದೆ. ಭಾರತವು ಆಳವಾಗಿ ಬೇರೂರಿದ ಅಧ್ಯಾತ್ಮದ ತವರೂರಾಗಿದ್ದು, ಅನೇಕತೆಯಲ್ಲಿ ಏಕತೆಯನ್ನು ಸಾರುವ ದೇಶವು ನಿಜಾರ್ಥದಲ್ಲಿ ಎಲ್ಲ ರೀತಿಯಲ್ಲೂ ಚಿನ್ನದ ಹಕ್ಕಿಯಾಗಿದೆ ಎಂದು ಉಡುಗೆಯ ಮೂಲಕ ಪ್ರತಿನಿಧಿಸಲಾಗಿದೆ.

ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯ 10 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ 23 ವರ್ಷದ ಸೌಂದರ್ಯ ರಾಣಿ ದಿವಿತಾ ಮಿಸ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದರು. 2021 ರ ಮಿಸ್ ಯೂನಿವರ್ಸ್, ಹರ್ನಾಜ್ ಸಂಧು ಅವರು ಈ ಸಂದರ್ಭದಲ್ಲಿ ದಿವಿತಾ ರೈಗೆ ಕಿರೀಟವನ್ನು ತೊಡಿಸಿದ್ದರು. ದಿವಿತಾ ಆರ್ಕಿಟೆಕ್ಟ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.

ದಿವಿತಾ ರೈ ಅವರ ತಂದೆ ದಿಲೀಪ್ ರೈ ಮತ್ತು ತಾಯಿ ಪ್ರವಿತಾ ರೈ ಮಂಗಳೂರಿನವರು.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸಂಸ್ಥೆಯನ್ನು ಸಂಪೂರ್ಣ ಮಹಿಳಾ ನಾಯಕತ್ವದ ತಂಡವು ನಡೆಸುತ್ತಿರುವುದು ವಿಶೇಷವಾಗಿದೆ.

ವಿಶ್ವ ಸುಂದರಿ ಸಂಸ್ಥೆಯ ಪ್ರಕಾರ ತಮ್ಮ ನೆಚ್ಚಿನ ಸ್ಪರ್ಧಾಳುವಿಗೆ ಮತ ಚಲಾಯಿಸಲು ವಿಶ್ವ ಸುಂದರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಮೊದಲ ಮತ ಉಚಿತವಾಗಿದ್ದು, ಹೆಚ್ಚು ಮತ ಚಲಾಯಿಸಿದರೆ, ನೆಚ್ಚಿನ ಸ್ಪರ್ಧಾಳು ಮುಂದಿನ ವಿಶ್ವ ಸುಂದರಿಯಾಗುವ ಉತ್ತಮ ಅವಕಾಶವಿದೆ. ಮತದಾನವು ಜನವರಿ 13 ರಂದು ಮಧ್ಯಾಹ್ನ 12:00 ಗಂಟೆಗೆ ಕೊನೆಗೊಳ್ಳುತ್ತದೆ.
ಒಬ್ಬರು ತಮ್ಮ ಮತ ಚಲಾಯಿಸಲು missuniverse.com ಗೆ ಭೇಟಿ ನೀಡಬಹುದು ಅಥವಾ #MissUniverse ಎಂಬ ಹ್ಯಾಶ್‌ಟ್ಯಾಗ್ ಮತ್ತು #Country ಎಂದು ದೇಶದ ಹೆಸರನ್ನು ಬಳಸಿಕೊಂಡು ಟ್ವೀಟ್ ಕೂಡಾ ಮಾಡಬಹುದು.