ಉಡುಪಿ: ಘನ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ಕಾರ್ಯಕ್ರಮ ಕ್ರೈಸ್ತ ಸಮುದಾಯದವರಿಗೆ ಮಾಡಿರುವ ಭಕ್ತಿ ಸಂಜೀವನ ಕೂಟವಾಗಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಸ್ಪಷ್ಟಪಡಿಸಿದ್ದಾರೆ.
ಸಮಾಧಾನದ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರದ ಷಡ್ಯಂತ್ರವಾಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕೂಡಲೇ ತಡೆ ನೀಡಬೇಕೆಂದು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ ಶ್ರೀಕಾಂತ್ ಶೆಟ್ಟಿ ಎಂಬವರು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಹಾಸ್ಯಾಸ್ಪದವಾಗಿದೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮದ ಆಚರಣೆಗಳನ್ನು ಮಾಡಲು ಮುಕ್ತವಾದ ಅವಕಾಶವಿದ್ದರೂ ಕೆಲವೊಂದು ಕೀಳು ಮನಸ್ಸಿನ ವ್ಯಕ್ತಿಗಳು ಅನಾವಶ್ಯಕವಾಗಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದು ಇಂತಹ ವ್ಯಕ್ತಿಗಳ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಕ್ರೈಸ್ತ ಬಾಂಧವರಿಗೆ ಈಗ ಪವಿತ್ರ ಕ್ರಿಸ್ತನ ಶಿಲುಭೆಯ ಶ್ರಮದಿನದ ಧ್ಯಾನ ಕಾಲ ನಡೆಯುತ್ತಿದ್ದು ಪ್ರತಿವರ್ಷವೂ ಈ ಸಂದರ್ಭದಲ್ಲಿ ಸಮಾಧಾನ ಮಹೋತ್ಸವವನ್ನು ಆಯೋಜಿಸಲಾಗುತ್ತಿದ್ದು ವಿಶೇಷವೇನಿಲ್ಲ. ಈ ಸಮಾಧಾನ ಮಹೋತ್ಸವ ಕ್ರೈಸ್ತ ಬಾಂಧವರಿಗಾಗಿ ಆಯೋಜಿಸುತ್ತಿದ್ದು ಎನ್ನುವ ಕನಿಷ್ಠ ಜ್ಞಾನ ವಿರೋಧಿಗಳಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಾರ್ಯಕ್ರಮ ಕೂಡ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿಲ್ಲ ಬದಲಾಗಿ ನಮ್ಮದೇ ಚರ್ಚಿನ ಆಡಳಿತದ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದು ಇದನ್ನು ವಿರೋಧಿಸುವ ಮನೋಸ್ಥೀತಿಗೆ ಒಕ್ಕೂಟದ ಖಂಡನೆ ವ್ಯಕ್ತಪಡಿಸುತ್ತೇವೆ.
ಲಾಝರಸ್ ಅವರ ವಿರುದ್ಧ ಸಾಕಷ್ಟು ಕ್ರಿಮಿನಲ್ ಕೇಸುಗಳಿದ್ದು ಅವರ ಹಿಂದು ವಿರೋಧಿ ಭಾಷಣ, ದ್ವೇಷಪೂರಿತ ಭಾಷಣ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕುರಿತಂತೆ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ ಎಂದು ಆರೋಪಿಸಿದ್ದಾರೆ. ಪ್ರತಿಯೊಬ್ಬ ಸಾಮಾಜಿಕ ವ್ಯಕ್ತಿಯ ವಿರುದ್ದ ಸುಳ್ಳು ಪ್ರಕರಣಗಳು ದಾಖಲಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದು ಅವೆಲ್ಲವೂ ಕೂಡ ಖುಲಾಸೆಯಾಗಿವೆ. ಅಲ್ಲದೆ 2018 ರ ಬಳಿಕ ಅವರ ವಿರುದ್ದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಅವರ ಹಿನ್ನಲೆ ಪಡೆದು ಬಳಿಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸೂಕ್ತ ಪರವಾನಿಗೆಯನ್ನು ಸಹಪಡೆಯಲಾಗಿದೆ.
ಉಡುಪಿಯ ಶಾಂತಿಯನ್ನು ಕೆಡಸುವ ದೃಷ್ಠಿಯಿಂದ ಸಭೆಯನ್ನು ಆಯೋಜಿಸಲಾಗಿದೆ ಎನ್ನುವ ವ್ಯಕ್ತಿಗಳು ಮೊದಲು ಅವರು ಶಾಂತಿ ಕದಡಲು ಮಾಡಿದ ಕೆಲವೊಂದು ಕಾರ್ಯಕ್ರಮಗಳು ಕೂಡ ಒಕ್ಕೂಟದ ಗಮನದಲ್ಲಿವೆ. ಸಮಾಧಾನ ಮಹೋತ್ಸವ ಕ್ರೈಸ್ತ ಭಾಂಧವರ ಆಧ್ಯಾತ್ಮಿಕ ಬದಲಾವಣೆಯ ನಿಟ್ಟಿನಲ್ಲಿ ಆಯೋಜಿಸಿದ್ದು ಇದನ್ನು ನಡೆಸದಂತೆ ವಿರೋಧ ವ್ಯಕ್ತಪಡಿಸುವ ಯಾವುದೇ ರೀತಿಯ ನೈತಿಕತೆ ಹಿಂದೂ ಜಾಗರಣ ವೇದಿಕೆಗಿಲ್ಲ. ಧಾರ್ಮಿಕ ಅಶಾಂತಿ ಮೂಡಿಸುವ ಕೆಲಸವನ್ನು ಶ್ರೀಕಾಂತ್ ಶೆಟ್ಟಿಯಂತಹ ಮುಖಂಡರು ಮಾಡ ಹೊರಟಿದ್ದು ಅಂತಹ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸುವಂತೆ ಹಾಗೂ ಸಮಾಧಾನ ಮಹೋತ್ಸವಕ್ಕೆ ಸೂಕ್ತ ಭದ್ರತೆ ಒದಗಿಸಿ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
















