ಉಡುಪಿ: ವಕೀಲರೊಬ್ಬರ ಮನೆಯಲ್ಲಿ ಕಳ್ಳತನ ನಡೆಸಿದ ಆರೋಪಿಗೆ ನಗರದ ಪ್ರಧಾನ ಹಿರಿಯ ಸಿಜೆ ಮತ್ತು ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ಫೆ.23 ರಂದು ಫಿಲಿಪ್ ಪಿ.ಥೋಮಸ್ ಎಂಬಾತನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಯುಬಿಎಂಸಿ ಜುಬಿಲಿ ಚರ್ಚ್ ಬಳಿಯಿರುವ ವಕೀಲ ನೋವೆಲ್ ಪ್ರಶಾಂತ್ ಕರ್ಕಡ ಇವರ ಮನೆಗೆ ನುಗ್ಗಿ, ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳವು ಮಾಡಿದ್ದು, ನಗರ ಠಾಣೆ ಉಪನಿರೀಕ್ಷಕರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಹಿರಿಯ ಸಿಜೆ ಮತ್ತು ಸಿ.ಜೆ.ಎಂ ನ್ಯಾಯಾಲಯದ ನ್ಯಾಧೀಶೆ ಶಕುಂತಲಾ ಎಸ್. ರವರು ಆರೋಪಿ ಫಿಲಿಪ್ ಪಿ.ಥೋಮಸ್ ಎಂಬಾತನಿಗೆ 8 ತಿಂಗಳು ಕಾರಾಗೃಹವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ ವಾದ ಮಂಡಿಸಿದ್ದಾರೆ.