ಉಡುಪಿ: ಜನತೆಗೆ ಆಮಿಷವನ್ನು ಒಡ್ಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಗ್ಯಾರಂಟಿಗಳನ್ನು ಮರೆತು ಜನರ ಗಮನವನ್ನು ಬೇರೆಡೆಗೆ ಒಯ್ಯಲು ವಿವಿಧ ಜನ ವಿರೋಧಿ, ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ತೊಡಗಿದೆ. ಇದರ ಭಾಗವಾಗಿ ವಿಧಾನಸಭೆಯಲ್ಲಿ ಉಪ ಸಭಾಪತಿಯವರ ಎದುರು ಪೇಪರ್ ಹರಿದು ಎಸೆದ ಕಾರಣಕ್ಕೆ ಸ್ಪೀಕರ್ ರವರು ಸರ್ವಾಧಿಕಾರಿ ಧೋರಣೆ ತಳೆದು ಬಿಜೆಪಿಯ 10 ಮಂದಿ ಶಾಸಕರನ್ನು ಅಸಾಂವಿಧಾನಿಕ ರೀತಿಯಲ್ಲಿ ಸದನದಿಂದ ಅಮಾನತುಗೊಳಿಸಿರುವುದು ಆತುರದ ನಿರ್ಧಾರದ ಅತ್ಯಂತ ಹೇಯ ಕೃತ್ಯವಾಗಿದೆ. ಈ ವಿಚಾರದಲ್ಲೂ ದಲಿತ ಕಾರ್ಡ್ ಬಳಕೆ ಮಾಡುತ್ತಿರುವ ಕಾಂಗ್ರೆಸ್ ಎಲ್ಲದರಲ್ಲೂ ಜಾತಿ, ಧರ್ಮ ಎಂದು ಜನತೆಯನ್ನು ವಿಭಜಿಸುವ ಕಾರ್ಯದಲ್ಲಿ ತೊಡಗಿರುವುದು ನಾಚಿಕೆಗೇಡು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಂವಿಧಾನ ವಿರೋಧಿ, ಜನ ವಿರೋಧಿ ನೀತಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದ ಬಳಿ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಯೋತ್ಪಾದಕರನ್ನು ‘ದೆ ಆರ್ ಮೈ ಬ್ರದರ್ಸ್’ ಎನ್ನುವ ಕಾಂಗ್ರೆಸ್, ಬೆಂಗಳೂರಿನ ಬಂಧಿತ ಭಯೋತ್ಪಾದಕರ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಬೇಕು. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಪ್ರಾಯಶಃ 2013-2018ರ ಅವಧಿಯಲ್ಲಿ ನಡೆದ ಸಿ.ಎಂ. ಸಿದ್ಧರಾಮಯ್ಯನವರ ನಿರಂಕುಶ ಆಡಳಿತದ ಭೀಕರತೆ ಪುನರಾವರ್ತನೆಗೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ರಾಜ್ಯದ ಜನತೆ ಇದರ ಫಲವನ್ನು ಉಣ್ಣಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರೈತರ ಸರಣಿ ಆತ್ಮಹತ್ಯೆ, ಅಲ್ಲಲ್ಲಿ ಕೊಲೆಗಳು ನಡೆಯುತ್ತಿವೆ. ಹಾಲಿನ ಸಹಿತ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕಾಂಗ್ರೆಸ್ ಘೋಷಿಸಿದ ನಕಲಿ ಗ್ಯಾರಂಟಿಗಳಲ್ಲಿ 200 ಯುನಿಟ್ ವಿದ್ಯುತ್ ಉಚಿತ ಎಂದಿದ್ದು, ಇದೀಗ ಯಥಾಸ್ಥಿತಿ ಹೆಚ್ಚಿನ ದರದ ವಿದ್ಯುತ್ ಬಿಲ್ ಬರುತ್ತಿದೆ. 10 ಕೆ.ಜಿ. ಅಕ್ಕಿ ಉಚಿತ ಎಂದಿದ್ದು, ಕೇಂದ್ರ ಸರಕಾರದ 5 ಕೆ.ಜಿ. ಹೊರತುಪಡಿಸಿ ಹೆಚ್ಚುವರಿ 10 ಕೆ.ಜಿ. ಅಕ್ಕಿ ನೀಡಬೇಕಿತ್ತು. ಆದರೆ ಅಕ್ಕಿ ಖರೀದಿಸಲು ಯೋಗ್ಯತೆ ಇಲ್ಲದ ರಾಜ್ಯ ಕಾಂಗ್ರೆಸ್ ಸರಕಾರ ಅಕ್ಕಿಯ ದುಡ್ಡನ್ನು ಖಾತೆಗೆ ಹಾಕುವ ಪ್ರಸ್ತಾಪ ಮಾಡಿದೆ. ಆದರೆ ಯಾವುದೇ ಗ್ಯಾರಂಟಿಗಳನ್ನು ಇದುವರೆಗೆ ಯಥಾವತ್ತಾಗಿ ಜಾರಿಗೆ ತಂದಿಲ್ಲ. ಇಂತಹ ಜನವಿರೋಧಿ ಸರಕಾರ ರಾಜ್ಯದಲ್ಲಿರುವುದು ಜನತೆಯ ದೌರ್ಭಾಗ್ಯವಾಗಿದೆ.
ರಾಜ್ಯದಲ್ಲಿ ಹಿಟ್ಲರ್ ಸರಕಾರ ಅಧಿಕಾರದಲ್ಲಿದೆ. ಸರಕಾರದ ನಿರಂಕುಶ ಆಡಳಿತ ವೈಖರಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಭಜರಂಗ ದಳ ಕಾರ್ಯಕರ್ತರಿಗೆ ಗಡಿಪಾರು ಮಾಡುತ್ತೇವೆ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ ಗ್ರಹಚಾರ ಹಿಡಿಯಬೇಕು ಎಂದಿದ್ದರೆ ಇಂತಹ ಗಡಿಪಾರು ಕಾನೂನು ಜಾರಿಗೆ ತರಲಿ. ಕರ್ನಾಟಕದಲ್ಲಿ ಅದರ ಪರಿಣಾಮ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್ ಹಾಗೂ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ ರವರು ಮಾತನಾಡಿ, ವಿಧಾನಸಭೆಯ ಸ್ಪೀಕರ್ ಕಾಂಗ್ರೆಸ್ಸಿನ ಕೈಗೊಂಬೆಯಂತೆ ವರ್ತಿಸಿ, ಸರ್ವಾಧಿಕಾರಿ ಧೋರಣೆಯಿಂದ ಬಿಜೆಪಿಯ 10 ಮಂದಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಿರುವ ಘಟನೆ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಮಾತನಾಡಿ, ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಭಯೋತ್ಪಾದಕರ ತನಿಖೆಯನ್ನು ಎನ್ಐಎ ಗೆ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ದಿನಕರ ಬಾಬು, ಶಿಲ್ಪಾ ಜಿ. ಸುವರ್ಣ, ಉಮೇಶ್ ನಾಯ್ಕ್, ಶ್ಯಾಮಲಾ ಎಸ್. ಕುಂದರ್, ಸಲೀಂ ಅಂಬಾಗಿಲು, ಸುಮಿತ್ರಾ ಆರ್. ನಾಯಕ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆೆಟ್ಟು, ನಳಿನಿ ಪ್ರದೀಪ್ ರಾವ್, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ವೀಣಾ ಎಸ್. ಶೆಟ್ಟಿ, ಶ್ರೀನಿಧಿ ಹೆಗ್ಡೆ, ವಿಖ್ಯಾತ್ ಶೆಟ್ಟಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಾಘವೇಂದ್ರ ಉಪ್ಪೂರು, ನಿತ್ಯಾನಂದ ನಾಯ್ಕ್, ದಾವೂದ್ ಅಬೂಬಕರ್, ಸತೀಶ್ ಕುಲಾಲ್, ಧೀರಜ್ ಎಸ್.ಕೆ., ಗೋಪಾಲ ಕಾಂಚನ್, ಅಕ್ಷಿತ್ ಶೆಟ್ಟಿ, ಆಸಿಫ್ ಕಟಪಾಡಿ, ಅಭಿರಾಜ್ ಸುವರ್ಣ, ಪ್ರವೀಣ್, ಪೂರ್ಣಿಮಾ ರತ್ನಾಕರ್, ರಶ್ಮಿತಾ ಬಿ. ಶೆಟ್ಟಿ, ದಿಲ್ಲೇಶ್ ಶೆಟ್ಟಿ, ರಶ್ಮಿ ಭಟ್, ಕಲ್ಪನಾ ಸುಧಾಮ, ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ಹರೀಶ್ ಶೆಟ್ಟಿ, ಅಶೋಕ್ ನಾಯ್ಕ್, ಗೋಪಾಲಕೃಷ್ಣ ರಾವ್, ರೋಷನ್ ಶೆಟ್ಟಿ, ಮಂಜುನಾಥ್ ಹೆಬ್ಬಾರ್, ಅಕ್ಷಯ್ ಶೆಟ್ಟಿ, ಯೋಗೀಶ್ ಶೆಟ್ಟಿ, ಸದಾನಂದ ಪ್ರಭು, ದಯಾಶಿನಿ, ಪ್ರೀತಿ, ಮಂಜುಳಾ ಪ್ರಸಾದ್ ಸಹಿತ ನಗರಸಭೆ ಸದಸ್ಯರು, ಗ್ರಾ.ಪಂ. ಸದಸ್ಯರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.