ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಲಕ್ಷ್ಮಣ ಫಲವನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಗುರುವಾರದಂದು ಭುಜಂಗ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ರಮೇಶ್ ಪಿ ನಾಯ್ಕ್ , ಪರಿಸರ ದಿನವನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೆ ವರ್ಷಪೂರ್ತಿ ಆಚರಿಸುವ ಕಾರ್ಯಕ್ಕೆ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದವರು ಮುಂದಾಗಿರುವುದು ಅತ್ಯುತ್ತಮ ವಿಚಾರ. ಜಿಲ್ಲೆಯಾದ್ಯಂತ 1000 ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಸಂಘದ ವತಿಯಿಂದ ನಡೆಯುತ್ತಿರುವುದು ಅಭಿನಂದನಾರ್ಹ. ಗಿಡಗಳನ್ನು ನೆಡುವುದು ದೊಡ್ಡದಲ್ಲ, ಆದರೆ ನೆಟ್ಟ ಗಿಡವನ್ನು ಪೋಷಿಸಿ ಬೆಳೆಸುವುದು ಮುಖ್ಯ ಎಂದರು.
ಮನೆಗೊಂದು ಗಿಡ ನೆಡುವ ಕಾರ್ಯ ನಮ್ಮಿಂದ ಆಗಬೇಕು. ಮರಗಳ ಹನನ, ವಾಹನ-ಕಾರ್ಖಾನೆಗಳ ಮಾಲಿನ್ಯ, ಪ್ಲಾಸ್ಟಿಕ್ ಕಾರಣದಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮವಾಗಿ ಇವತ್ತು ಉಡುಪಿಯಂತಹ ಊರಿನಲ್ಲೂ ಕುಡಿಯುವ ನೀರಿಗೆ ಬರದಂತಹ ಪರಿಸ್ಥಿತಿ ಬಂದೊದಗಿದೆ. ಪರಿಸರ ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದ್ದು, ಇದು ಮುಂದಿನ ಪೀಳಿಗೆಗೆ ನಾವು ನೀಡುವ ಅತಿ ದೊಡ್ಡ ಕೊಡುಗೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರ್ಯ ಪರಿಸರ ರಕ್ಷಣೆಯ ಮಹತ್ವ ತಿಳಿಸಿದರು. ಸಾರ್ವಜನಿಕರು ಒಂದು ಗಿಡ ನೆಟ್ಟು ಮೂರು ವರ್ಷಗಳವರೆಗೆ ಪೋಷಿಸಿದಲ್ಲಿ ಇಲಾಖೆಯ ವತಿಯಿಂದ ಒಂದು ಮರಕ್ಕೆ 125ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿ ಮರಗಳನ್ನು ಅನಾವಶ್ಯಕವಾಗಿ ಕಡಿಯಬಾರದು ಎಂದು ಕಿವಿ ಮಾತು ಹೇಳಿದರು.
ಆರ್.ಟಿ.ಓ ಸಾರಿಗೆ ಅಧಿಕಾರಿ ರವಿ ಶಂಕರ್ ಪಿ ಮಾತನಾಡಿ ಪ್ರತಿಯೊಬ್ಬರೂ ತಮಗೆ ಡಿ.ಎಲ್ ಸಿಕ್ಕಿದ್ದಾಗ ಅಥವಾ ತಾವು ಹೊಸಕಾರು ಕೊಂಡಾಗ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಪರಿಸರ ಪ್ರೇಮಿಗಳಾದ ವೈದ್ಯ ಡಾ. ಮನೋಹರ್ ಬೋಳಾರ್, ಮಧುಸೂಧನ್ ಹೇರೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲ್ ಪರಿಸರ ರಕ್ಷಣೆಯ ಮಹತ್ವ ತಿಳಿಸಿದರು.
ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೆ 1000 ಗಿಡಗಳನ್ನು ಉಚಿತವಾಗಿ ನೀಡುವುದು ಮಾತ್ರವಲ್ಲದೆ ಈ ಗಿಡಗಳನ್ನು ಪೋಷಿಸಿ ಆರೈಕೆ ಮಾಡಲಾಗುವುದು. ಗಿಡಗಳನ್ನು ಪಡೆದು ಅತ್ಯುತ್ತಮ ರೀತಿಯಲ್ಲಿ ನೆಟ್ಟು ಪೋಷಿಸುವ ವ್ಯಕ್ತಿ, ಶಾಲೆ-ಕಾಲೇಜು ಅಥವಾ ಸಂಘ ಸಂಸ್ಥೆಗಳಿಗೆ ಮುಂದಿನ ವರ್ಷ ಸಂಘದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಸಂಘದ ಕಾರ್ಯದರ್ಶಿ ಉದಯ್ ಕಿರಣ್ ನಿರೂಪಿಸಿ ವಂದಿಸಿದರು.
ನೂರಕ್ಕೂ ಮಿಕ್ಕಿ ಸಾರ್ವಜನಿಕರು ಗಿಡಗಳನ್ನು ಪಡೆದು ಪರಿಸರ ಕಾಳಜಿ ಮೆರೆದರು.