ಸುಳ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಸ್ ಅಂಗಾರಗೆ ಟಿಕೆಟ್ ನೀಡದೆ ಭಾಗೀರಥಿ ಮುರುಳ್ಯಗೆ ಟಿಕೆಟ್ ನೀಡಿದ್ದಕ್ಕೆ ಸುಳ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದು ಜಗಳ ನಡೆದಿತ್ತು. ಅಂದಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬಿಜೆಪಿ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಈ ವೇಳೆ ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ನೇಮಕ ಮಾಡಲಾಗಿದೆ. ವೆಂಕಟ್ ವಳಲಂಬೆ ಅವರನ್ನು ಪುನಃ ಆಯ್ಕೆ ಮಾಡಿರುವುದಕ್ಕೆ ಹಾಲಿ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸುಳ್ಯ ಮಂಡಲ ಸಮಿತಿಯಿಂದ ಅಧ್ಯಕ್ಷ ಸ್ಥಾನಕ್ಕೆ ವಿನಯ ಮುಳುಗಾಡು ಅವರ ಹೆಸರನ್ನು ಜಿಲ್ಲಾ ಸಮಿತಿಗೆ ಕಳುಹಿಸಲಾಗಿತ್ತು. ಆದರೆ ಪಟ್ಟಿಯಲ್ಲಿ ಕಾಣಿಸದೇ ಇದ್ದ ವೆಂಕಟ್ ವಳಲಂಬೆಯವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಎಸ್ ಅಂಗಾರಗೆ ಟಿಕೆಟ್ ನಿರಾಕರಿಸಿದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ನಾಯಕರ ಧೋರಣೆಯಿಂದ ಬೇಸತ್ತು ತನ್ನ ಸ್ಥಾನಕ್ಕೆ ವೆಂಕಟ್ ವಳಲಂಬೆ ರಾಜೀನಾಮೆ ನೀಡಿದ್ದರು. ಹೀಗಾಗಿ ಎರಡನೇ ಬಾರಿಗೆ ಸುಳ್ಯ ಮಂಡಲ ಸಮಿತಿಗೆ ಆಯ್ಕೆ ಮಾಡಿದ್ದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆ ನಿನ್ನೆ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಕಚೇರಿಯಲ್ಲಿ ಪ್ರಮುಖರ ಸಭೆ ನಡೆದಿದ್ದು, ಪಕ್ಷದ ಪ್ರಮುಖರು ಸಭೆ ನಡೆಸಿ ಕೋರ್ ಕಮಿಟಿ ಶಿಫಾರಸ್ಸು ಮಾಡಿದವರನ್ನು ಅಧ್ಯಕ್ಷರನ್ನಾಗಿ ಮಾಡದಿರುವುದನ್ನು ಖಂಡಿಸಿ ಪಕ್ಷದ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.