ಉಡುಪಿ: ಪಕ್ಷವು ವಿಶ್ವಾಸದಿಂದ ನೀಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ವಿಜಯ ಸಾಧಿಸುವ ಗುರಿ ಬಹಳ ಮುಖ್ಯವಾಗಿದೆ. ಶಿಸ್ತು, ಸಂಯಮ, ಸಂಘಟನೆಯಿಂದ ಪಕ್ಷದ ತತ್ವ ಸಿದ್ಧಾಂತಗಳ ಚೌಕಟ್ಟಿನೊಳಗೆ ಪಕ್ಷವನ್ನು ಎತ್ತರಕ್ಕೆ ಬೆಳೆಸುವ ಜೊತೆಗೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳನ್ನು ನೀಡುತ್ತಾ ಬಂದಿರುವ ಪಕ್ಷ ಬಿಜೆಪಿ. ಸೇವೆಯೇ ಸಂಘಟನೆ ಎಂಬ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಚುನಾವಣಾ ಗೆಲುವಿನ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುವುದು ಅಗತ್ಯ. ಮಂಡಲ, ಶಕ್ತಿ ಕೇಂದ್ರ, ಗ್ರಾಮ ಪಂಚಾಯತ್ ಹಾಗೂ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಪಕ್ಷವನ್ನು ಸದೃಢಗೊಳಿಸಬೇಕು ಎಂದರು. ಬೂತ್ ಮಟ್ಟದಲ್ಲಿ ಪಂಚರತ್ನ ಸಮಿತಿ ರಚನೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಟುಂಬ ಮಿಲನ ಮುಂತಾದ ಸಕಾರಾತ್ಮಕ ಚಟುವಟಿಕೆಗಳ ಮೂಲಕ ಮುಂಬರಲಿರುವ ಚುನಾವಣೆಯಲ್ಲಿ ಸಂಘಟನಾತ್ಮಕ ಶಕ್ತಿಯಿಂದ ಇಡೀ ಗ್ರಾಮ ಪಂಚಾಯತ್ಗಳಲ್ಲಿ ಗೆಲುವು ಸಾಧಿಸುವ ಪಣ ತೊಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಎಲ್ಲಾ ಸ್ತರಗಳಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಆಡಳಿತದ ಚುಕ್ಕಾಣಿ ಹಿಡಿದಿರುವುದು ಹೆಮ್ಮೆಯ ವಿಚಾರ. ಹಿರಿಯರು ತ್ಯಾಗ, ಪರಿಶ್ರಮದಿಂದ ಕಟ್ಟಿ ಬೆಳಿಸಿರುವ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಮೇಲಿದೆ ಎಂದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ 130ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್ಗಳನ್ನು ಗೆಲ್ಲುವ ಗುರಿ ಇದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.