ಬುಕ್ ಮೈ ಶೋ ವಿರುದ್ದ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ: ಕನ್ನಡ ಚಿತ್ರಗಳಿಗೆ ಅನ್ಯಾಯದ ಗಂಭೀರ ಆರೋಪ

ಬೆಂಗಳೂರು: ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್ ನಲ್ಲಿ ಮುಂಗಡವಾಗಿ ಟಿಕೇತು ಖರೀದಿಸಿಡುವ ಆನ್ ಲೈನ್ ವೇದಿಕೆ ಬುಕ್ ಮೈ ಶೋ ಮೇಲೆ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇದಿಕೆಯಲ್ಲಿ ಪ್ರೇಕ್ಷಕರ ವಿಮರ್ಶೆ ಮತ್ತು ಚಿತ್ರದ ರೇಟಿಂಗ್ ಗಳನ್ನು ತೋರಿಸಲು ಷರತ್ತುಗಳನ್ನು ವಿಧಿಸಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.

ವೀಕ್ಷಕರು ವಿಮರ್ಶೆಗಳನ್ನು ನೋಡಿ ಚಿತ್ರ ನೋಡಲು ಮುಂದಾಗುತ್ತಾರೆ. ಆದರೆ ಇಲ್ಲಿ ವಿಮರ್ಶೆಗಳನ್ನು ಕಾಣದಂತೆ ಮಾಡಿರುವುದು ವಿಂಡೋ ಸೀಟ್ ನಿರ್ದೇಶಕಿಯ ಸಿಟ್ಟಿಗೆ ಕಾರಣವಾಗಿದೆ.

ಈ ದಿನ.ಡಾಟ್ ಕಾಮ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೀತಲ್, ಬುಕ್ ಮೈ ಶೋನಲ್ಲಿ ಮೊದಲಿಗೆ ನಮ್ಮ ಸಿನಿಮಾ ತೋರಿಸಲು ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ಹಣ ನೀಡಬೇಕು. ದುಡ್ಡು ನೀಡಿದ ಮೇಲೆ ಸಿನಿಮಾಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಅವರು ತೋರಿಸಬೇಕು. ಬುಕ್ ಮೈ ಶೋ ಮೂಲಕ ಟಿಕೆಟ್ ಖರೀದಿಸುವವರು ಟಿಕೆಟ್ ಬೆಲೆಗಿಂತ ಅಧಿಕವಾಗಿ 30 ರೂ ನೀಡುತ್ತಿದ್ದರೆ. ಆದಾಗ್ಯೂ ಸಿನಿಮಾ ಬಗೆಗಿನ ವಿಮರ್ಶೆಗಳನ್ನು ತೋರಿಸಲು ಪ್ರತ್ಯೇಕ ಹಣ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ವಿಮರ್ಶೆಗಳು ಬಂದಿದ್ದರೆ ಮಾತ್ರ ವಿಮರ್ಶೆಗಳನ್ನು ತೋರಿಸುತ್ತಾರೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.

ಬೇರೆ ಭಾಷೆಯ ಸಿನಿಮಾಗಳಿಗೆ ಈ ರೀತಿ ಸಮಸ್ಯೆಗಳು ಎದುರಾಗುವುದಿಲ್ಲ, ಕೇವಲ ಕನ್ನಡ ಸಿನಿಮಾಗಳಿಗಷ್ಟೆ ಇಂತಹ ನಿರ್ಬಂಧ ಯಾಕೆ ಎಂದು ಪ್ರಶ್ನಿಸಿದ್ದಾರೆ. ದುಡ್ಡು ಕೊಟ್ಟು ಸುಳ್ಳು ವಿಮರ್ಶೆ ಹಾಕಿಸಲು ತಾನು ತಯಾರಿಲ್ಲ. ಕನ್ನಡ ಚಿತ್ರರಂಗಕ್ಕೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.