ಶಿಥಿಲಗೊಂಡಿದೆ ಶಿರಿಬೀಡಿನ ಕಿರುಸೇತುವೆ; ದೂರು ನೀಡಿದರೂ ಸ್ಪಂದಿಸದ ಅಧಿಕಾರಿಗಳು

ಉಡುಪಿ: ಇಲ್ಲಿನ ಶಿರಿಬೀಡು ವಾರ್ಡಿನಲ್ಲಿ ಕಿರುಸೇತುವೆಯು ಶಿಥಿಲಗೊಂಡಿದ್ದು, ಜನರ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಸೇತುವೆ ಮೇಲೆ ಪ್ರತಿನಿತ್ಯವೂ ನೂರಾರು ಪಾದಾಚಾರಿಗಳು ಜೊತೆಗೆ ದ್ವಿಚಕ್ರ ವಾಹನ ಸವಾರರು ಕೂಡ ಸಂಚರಿಸುತ್ತಾರೆ. ಸೇತುವೆಯು ಉಡುಪಿ ಬಸ್ ಸ್ಟ್ಯಾಂಡ್ ನಿಂದ ತಾಲೂಕ್ ಆಫೀಸ್ ಗೆ ಒಳದಾರಿಯಾಗಿದೆ. ಮಾತ್ರವಲ್ಲದೆ, ಅಂಬಲಪಾಡಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಾಗೂ ಸೈಂಟ್ ಸಿಸಿಲಿಸ್ ಕಾನ್ವೆಂಟ್ ಶಾಲೆಗೂ ಒಳದಾರಿಯಾಗಿದ್ದು ದಿನನಿತ್ಯ ನೂರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಶಿಥಿಲಾವಸ್ತೆಯಲ್ಲಿರುವ ಸೇತುವೆ ಮೂಲಕ ಸಂಚರಿಸಲು ಜನ ಭಯ ಪಡುವಂತಾಗಿದೆ.

ಉಡುಪಿ ನಗರ ವ್ಯಾಪ್ತಿಯ ಮಳೆ ನೀರು ಸೇತುವೆ ಕೆಳಗಿನ ತೋಡಿನಲ್ಲಿ ಹರಿದು ಹೋಗುತ್ತಿದ್ದು ದಿನನಿತ್ಯ ಈ ಪರಿಸರದಲ್ಲಿ ನೆರೆ ಉಂಟಾಗುತ್ತಿದ್ದು ಈ ಸೇತುವೆ ಯಾವ ಸಂದರ್ಭದಲ್ಲಿ ನೀರು ಪಾಲಾಗುವುದೋ ಎಂದು ಭಯಪಡುತ್ತಾ ಈ ಸೇತುವೆಯನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡ ಸುರೇಶ್ ಶೆಟ್ಟಿ ಬನ್ನಂಜೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನಗರಸಭಾ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸ್ಥಳೀಯ ನಗರಸಭಾ ಸದಸ್ಯರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಉಡುಪಿ ಜಿಲ್ಲಾಧಿಕಾರಿಯವರು ಕೂಡಲೇ ಈ ಸೇತುವೆಯ ದುರಸ್ತಿಯ ಕಾರ್ಯವನ್ನು ಕೈಗೆತ್ತಿಕೊಂಡು ಜನಸಾಮಾನ್ಯರ ಪ್ರಾಣವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.