ಉಡುಪಿ: ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಆ 19 ರಂದು ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಾಗಾರವನ್ನು ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ನಗರಸಭೆ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಂಥಾಲಯದ ಆವರಣದಲ್ಲಿ ಮಲಬಾರ್ ಗೋಲ್ಡ್ ವತಿಯಿಂದ ಉಚಿತವಾಗಿ ನೀಡಿದ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ವಿದ್ಯಾರ್ಥಿಗಳು ಜಿಲ್ಲೆಗೇ ಮಾದರಿಯಾದ ಈ ಗ್ರಂಥಾಲಯದ ಸದುಪಯೋಗವನ್ನು ಪಡೆದು ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕು ಹಾಗೂ ಇವತ್ತಿನ ಈ ಡಿಜಿಟಲ್ ಗ್ರಂಥಾಲಯ ಕಾರ್ಯಾಗಾರವನ್ನು ಬಳಸಿಕೊಂಡು ಇ-ಗ್ರಂಥಾಲಯದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿ ಎಂದರು.
ಇಂತಹ ಉತ್ತಮ ಕಾರ್ಯಾಗಾರವನ್ನು ರೂಪಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲಬಾರ್ ಗೋಲ್ಡ್ನ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಮಾತನಾಡಿ ಪುಸ್ತಕ ಓದುವ ಜ್ಞಾನದೇಗುಲವೆಂದರೆ ಅದು ಗ್ರಂಥಾಲಯ. ಆ ಗ್ರಂಥಾಲಯದ ಅಂದವನ್ನು ಇನ್ನೂ ಹೆಚ್ಚಿಸಲು ಗ್ರಂಥಾಲಯದ ಆವರಣದಲ್ಲಿ ಉತ್ತಮ ಸಸಿಗಳನ್ನು ನೆಡಬೇಕು ಮತ್ತು ಗ್ರಂಥಾಲಯದಲ್ಲಿ ಶುದ್ಧವಾದ ವಾತಾವರಣವನ್ನು ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಸಸಿಗಳನ್ನು ಈ ಗ್ರಂಥಾಲಯಕ್ಕೆ ನೀಡಿದ್ದೇವೆ ಎಂದರು.
ಗ್ರಾಮೀಣ ಗ್ರಂಥಾಲಯಗಳನ್ನು ಆಕರ್ಷಕ ಗ್ರಂಥಾಲಯಗಳನ್ನಾಗಿ ಬದಲಾಯಿಸಿದಂತಹ ರೀನಾ ಎಸ್. ಹೆಗ್ಡೆ, ಜಿಲ್ಲಾ ಸಂಯೋಜಕರು, ಶಿಕ್ಷಣ ಪೌಂಡೇಶನ್ ಇವರು ಮಾತನಾಡಿ ಗ್ರಂಥಾಲಯವು ಜ್ಞಾನ ದೇಗುಲ ಮಾತ್ರವಲ್ಲ, ಮನುಷ್ಯನ ಮನಸ್ಸನ್ನು ಸದೃಢಮಾಡುವ ಭಂಡಾರವಿದ್ದಂತೆ. ಮನಸ್ಸನ್ನು ಸಧೃಡ ಮಾಡಿಕೊಂಡಲ್ಲಿ ನಾವು ಜೀವನದ ಗುರಿ ತಲುಪಲು ಸಾಧ್ಯ. ಆದ್ದರಿಂದ ಆದಷ್ಟು ಗ್ರಂಥಾಲಯ ಸದುಪಯೋಗ ಮಾಡಿಕೊಳ್ಳಿ. ನೂರು ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ ಪುಸ್ತಕ ಎಂಬ ಒಬ್ಬ ಸ್ನೇಹಿತನನ್ನು ಸಂಪಾದಿಸಿದರೆ ಉತ್ತಮ ಜೀವನವನ್ನು ರೂಪಿಸಬಹುದು ಎಂದು ಹಿತವಚನ ನುಡಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಗಿರಿಜಾ ಹೆಗ್ಡೆ ಗಾಂವ್ಕರ್ ಮಾತನಾಡಿ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿಧದ ವಿಭಾಗಗಳಿದ್ದು, ಬಹಳಷ್ಟು ಪುಸ್ತಕಗಳು ಲಭ್ಯವಿರುತ್ತದೆ. ಡಿಜಿಟಲ್ ಗ್ರಂಥಾಲಯ ಕಾರ್ಯಾಗಾರದಿಂದ ಬಹಳಷ್ಟು ಮಾಹಿತಿಗಳು ಲಭ್ಯವಾಯಿತು. ಅಲ್ಲದೆ, ವಿವಿಧ ರೀತಿಯ ಕಾರ್ಯಾಗಾರವನ್ನು ಗ್ರಂಥಾಲಯದಲ್ಲಿ ಆಗಾಗ ಮಾಡುತ್ತಿರುವುದು ಬಹಳ ಉಪಯುಕ್ತವಾಗುತ್ತಿದೆ. ಇದರಿಂದ, ಜನರು ಗ್ರಂಥಾಲಯದತ್ತ ಆಕರ್ಷಿತರಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಇಲ್ಲಿಯ ಅಧಿಕಾರಿ, ಸಿಬ್ಬಂದಿ ಮಿತ್ರರಿಗೆ ಅಭಿನಂದನೆ ಸಲ್ಲಿಸಿದರು
ಗ್ರಂಥಾಲಯಕ್ಕೆ ಬಂದಂತಹ ಸುಮಾರು 150 ವಿದ್ಯಾರ್ಥಿಗಳಿಗೆ ಗ್ರಂಥಲಯದ ವಿವಿಧ ವಿಭಾಗಗಳನ್ನು ಪರಿಚಯಿಸಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾರಾ, ಗ್ರಂಥಾಲಯಕ್ಕೆ ಭೇಟಿ ನೀಡಿರುವುದು ನನಗೆ ಹಾಗೂ ನನ್ನ ಸಹಪಾಠಿಗಳಿಗೆ ಬಹಳ ಸಂತೋಷವಾಗಿದೆ. ಗ್ರಂಥಾಲಯದಲ್ಲಿ ವಿವಿಧ ವಿಭಾಗಗಳಿದ್ದು, ಇದರಿಂದ ಎಲ್ಲಾ ವಯೋಮಾನದವರಿಗೆ ಅನುಕೂಲವಾಗಿದೆ. ಹಾಗೂ ಇವತ್ತು ಹಮ್ಮಿಕೊಂಡ ಈ ಕಾರ್ಯಾಗಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ , ಡಿಜಿಟಲ್ ಗ್ರಂಥಾಲಯವನ್ನು ಎಲ್ಲಾ ಕಡೆಗಳಲ್ಲೂ ಸದ್ಬಳಕೆ ಮಾಡಬೇಕೆಂಬ ಅರಿವು ಮೂಡಿದೆ ಎಂದರು. ಈ ಗ್ರಂಥಾಲಯದಲ್ಲಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಹಿಳೆಯಾದ್ದರಿಂದ, ಮಹಿಳೆಯರ ಶಕ್ತಿ ಪ್ರಬಲವಾಗಿದೆ ಎಂದರು.
ಇನ್ನೋರ್ವ ವಿದ್ಯಾರ್ಥಿನಿ ವಿಜೇತ ತಮ್ಮಲ್ಲಿ ಸಂಗ್ರಹವಿರುವ ಕೆಲವೊಂದು ಪುಸ್ತಕಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಮೂಲಕ ನಗರ ಕೇಂದ್ರ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಶಿಕ್ಷಣ ಪೌಂಡೇಶನ್ನ ಕುಂದಾಪುರ ತಾಲೂಕಿನ ಸಂಯೋಜಕಿ ನಮಿತಾ ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,
ಗ್ರಂಥಪಾಲಕಿ ರಂಜಿತ ಸಿ., ಡಿಜಿಟಲ್ ಗ್ರಂಥಾಲಯದ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸಹಾಯಕಿ ಸುನೀತಾ ಬಿ.ಎಸ್. ಪ್ರಾರ್ಥಿಸಿ ವಂದಿಸಿದರು. ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ನಿರೂಪಿಸಿದರು.