ರಾಜ್ಯದಲ್ಲೇ ಪ್ರಥಮ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಡಿಜಿಟಲ್ ಬಸ್

ಮಂಗಳೂರು: ಮಂಗಳೂರಿನ ಎಂ ಫ್ರೆಂಡ್ಸ್ ಎಂಬುದು ವಾಟ್ಸಪ್ ಗ್ರೂಪ್ ಮೂಲಕ 2013 ರಲ್ಲಿ ಆರಂಭವಾದ ಸಂಘಟನೆ. ಈ ಸಂಘಟನೆ ಆರೋಗ್ಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ ನೀಡುತ್ತಿದೆ. ಇದೀಗ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆಗಿರುವ ಈ ಸಂಸ್ಥೆ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಲೋಕಾರ್ಪಣೆಗೊಳಿಸಿದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ದೃಷ್ಟಿಯಿಂದ‌ ಮಂಗಳೂರಿನ ಎಂ ಫ್ರೆಂಡ್ಸ್ ಸಂಸ್ಥೆ ಹೊಸ ಯೋಜನೆ ಆರಂಭಿಸಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ “ಕ್ಲಾಸ್ ಆನ್ ವ್ಹೀಲ್ಸ್” ಎಂಬ ಹೆಸರಲ್ಲಿ ಹವಾನಿಯಂತ್ರಿತ ಬಸ್​ನ್ನು ಸಿದ್ಧಪಡಿಸಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ. ಗ್ರಾಮೀಣ ಭಾಗದ ಶಾಲೆಗಳಿಗೆ ಹೋಗಿ ಅವರಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಈ ಡಿಜಿಟಲ್ ಬಸ್ ಆರಂಭಿಸಲಾಗಿದೆ.