ಉಡುಪಿ: ಕಳೆದ ಮೂರು ತಿಂಗಳಿನಿಂದ ಮೀನುಗಾರರಿಗೆ ಬಾಕಿಯಿದ್ದ ಡಿಸೇಲ್ ಸಬ್ಸಿಡಿ ಬಾಕಿ ಮೊತ್ತ ₹70 ಕೋಟಿ ಬಿಡುಗಡೆಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾಡದೋಣಿ ಮೀನುಗಾರರಿಗೆ ಬಾಕಿಯಿದ್ದ 60 ಸಾವಿರ ಲೀಟರ್ ಸೀಮೆಎಣ್ಣೆ ಬಿಡುಗಡೆಯಾಗಿದೆ. ಇನ್ನು 4 ಲಕ್ಷ ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲು ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಿಸುವುದನ್ನು ಸ್ಥಗಿತಗೊಳಿಸಿದೆ. ಹಾಗಾಗಿ ಸೀಮೆಎಣ್ಣೆ ಇಲ್ಲದೆ ನಾಡದೋಣಿ ಮೀನುಗಾರಿಕೆ ಮಾಡಲು ಸಾಧ್ಯವಿಲ್ಲ ಎನ್ನುವ ವಿಷಯವನ್ನು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅವರಿಗೆ ಮನವರಿಕೆ ಮಾಡಲಾಗುವುದು. ಹಾಗೆ ಬಾಕಿ ಇರುವ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.
ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮರೀನಾ ಯೋಜನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮರೀನಾ ಯೋಜನೆ ಬಗ್ಗೆ ಇನ್ನಷ್ಟೇ ಪರಿಶೀಲಿಸಿ ತಿಳಿದುಕೊಳ್ಳಬೇಕಿದೆ. ಟೆಗ್ಮಾ ಸಂಸ್ಥೆಯ ಕರಾರು ಒಪ್ಪಂದದ ಕುರಿತು ಮತ್ತು ಮಲ್ಪೆ ಸ್ಲಿಪವೇ ಅನ್ನು ಮಲ್ಪೆ ಮೀನುಗಾರರ ಸಂಘಕ್ಕೆ ಹಸ್ತಾಂತರಿಸುವ ಬಗ್ಗೆ ಬೆಂಗಳೂರಿನಲ್ಲಿ ಮಂಗಳವಾರ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಈ ಮೂರು ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.