ಐಪಿಎಲ್ ಗೆ ಗುಡ್ ಬೈ ಹೇಳಿದ ಧೋನಿ: ಇನ್ನು ಸಿಎಸ್‌ಕೆ ತಂಡದ ಮೆಂಟರ್ ಆಗಿ ತಂಡ ಮುನ್ನಡೆಸಲಿರುವ ಕೂಲ್ ಕ್ಯಾಪ್ಟನ್!

ಚೆನ್ನೈ : ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಇದೀಗ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2027ರ ಐಪಿಎಲ್ ಟೂರ್ನಿಯಿಂದ ಆಟಗಾರನಾಗಿ ಮೈದಾನಕ್ಕಿಳಿಯುವ ಬದಲು ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ.

ಕಳೆದ ಎರಡು ದಶಕಗಳಿಂದ ಸಿಎಸ್‌ಕೆ ತಂಡದೊಂದಿಗೆ ನಂಟು ಹೊಂದಿರುವ ಧೋನಿ, ತಂಡದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಮುಂದಿನ ಜವಾಬ್ದಾರಿಯ ಬಗ್ಗೆ ಮಾತನಾಡಿರುವ ಫ್ರಾಂಚೈಸಿಯ ಪ್ರಮುಖರು, ಧೋನಿ ಮತ್ತು ಚೆನ್ನೈ ತಂಡದ ನಡುವಿನ ಬಾಂಧವ್ಯವನ್ನು ಕೊಂಡಾಡಿದ್ದಾರೆ. ಧೋನಿ ಕೇವಲ ಆಟಗಾರನಲ್ಲ, ಸಿಎಸ್‌ಕೆ ತಂಡದ ಗುರುತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಧೋನಿ ನಮ್ಮ ತಂಡದ ಅವಿಭಾಜ್ಯ ಅಂಗ: ಶ್ರೀನಿವಾಸನ್

ಸಿಎಸ್‌ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿ ಜೊತೆಗಿನ ದೀರ್ಘಕಾಲದ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಕಳೆದ ಸುಮಾರು 20 ವರ್ಷಗಳಿಂದ ತಂಡದೊಂದಿಗೆ ಧೋನಿ ಬೆಸೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಅನೇಕ ಗೆಲುವು, ಸೋಲುಗಳನ್ನು ಒಟ್ಟಾಗಿ ಎದುರಿಸಿದ್ದೇವೆ. ತಂಡದೊಂದಿಗಿನ ಅವರ ಬದ್ಧತೆ ಮತ್ತು ವ್ಯಕ್ತಿತ್ವ ಅಪಾರವಾದದ್ದು ಎಂದು ಶ್ಲಾಘಿಸಿದ್ದಾರೆ.

2008ರಲ್ಲಿ ಧೋನಿ ಅವರನ್ನು ಚೆನ್ನೈ ತಂಡಕ್ಕೆ ಕರೆತರುವ ನಿರ್ಧಾರವನ್ನು ಸ್ಮರಿಸಿದ ಶ್ರೀನಿವಾಸನ್, ಅದು ತಾವು ತೆಗೆದುಕೊಂಡ ಅತ್ಯಂತ ಉತ್ತಮ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಧೋನಿ ಅವರ ಕ್ರಿಕೆಟ್ ಸಾಧನೆ ಮಾತ್ರವಲ್ಲದೆ, ಅವರ ಸರಳತೆ ಮತ್ತು ನಾಯಕತ್ವದ ಗುಣಗಳೂ ಅವರನ್ನು ವಿಶಿಷ್ಟವಾಗಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ಆಟಗಾರರ ಪಾಲಿಗೆ ಮಾರ್ಗದರ್ಶಕ

ಸಿಎಸ್‌ಕೆ ಮಾಲೀಕರಾದ ರೂಪಾ ಗುರುನಾಥ್ ಮಾತನಾಡಿ, ಧೋನಿ ಅವರಂತಹ ಆಟಗಾರರು ಅಪರೂಪ. ತಂಡದ ಆರಂಭದಿಂದಲೂ ನಮ್ಮೊಂದಿಗಿರುವ ಅವರು, ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ರೂಪುಗೊಳ್ಳುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮೆಂಟರ್ ಆಗಿ ತಂಡದ ಜವಾಬ್ದಾರಿ ನಿರ್ವಹಿಸಲಿರುವ ಧೋನಿ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅವರ ಸುದೀರ್ಘ ಕ್ರಿಕೆಟ್ ಅನುಭವ, ಆಟದ ಒಳನೋಟ ಹಾಗೂ ನಾಯಕತ್ವದ ಗುಣಗಳು ಹೊಸ ಆಟಗಾರರಿಗೆ ಸ್ಫೂರ್ತಿಯಾಗಲಿವೆ. ಈ ಮೂಲಕ ಮುಂದಿನ ತಲೆಮಾರಿನ ಸಿಎಸ್‌ಕೆ ಆಟಗಾರರನ್ನು ರೂಪಿಸುವಲ್ಲಿ ಧೋನಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ರೂಪಾ ಗುರುನಾಥ್ ವ್ಯಕ್ತಪಡಿಸಿದ್ದಾರೆ.