ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಅಳವಡಿಸಿದ್ದ ಬೃಹತ್ ತಗಡಿನ ಪೆಂಡಲ್ ಕುಸಿದ ದುರ್ಘಟನೆ ಗುರುವಾರ ಧರ್ಮಸ್ಥಳದಲ್ಲಿ ನಡೆದಿದೆ. ಆದರೆ ಯಾವುದೇ ರೀತಿಯಲ್ಲಿ ಪ್ರಾಣಾಹಾನಿಯಾಗಿಲ್ಲ ಎನ್ನುವ ಮಾಹಿತಿ ಲಭಿಸಿದೆ.
ಈ ಪೆಂಡಲ್ನ ಕೆಳಗಡೆ ಕುಳಿತು ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದು, ಅವರೆಲ್ಲ ಅಪರಾಹ್ನ ೧.೩೦ರ ಸುಮಾರಿಗೆ ಅನ್ನಪ್ರಸಾದ ಸ್ವೀಕರಿಸಲು ತೆರಳಿದ್ದರು. ಭಕ್ತಾಧಿಗಳು ಪೆಂಡಲ್ನಿಂದ ಹೊರಗಡೆ ತೆರಳಿದ ಕೆಲವೇ ನಿಮಿಷದಲ್ಲಿ ತಗಡಿನ ಈ ಪೆಂಡಲ್ ನೆಲಕ್ಕೆ ಕುಸಿದಿದೆ. ಈ ಸಂದರ್ಭ ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಪೆಂಡಲ್ನ ಕೆಳಗೆ ಕುಳಿತಿದ್ದರು. ಇವರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ.
ಕಾರ್ಯಕ್ರಮದಲ್ಲಿ ಬಾಹುಬಲಿಯ ಪಂಚ ಮಹಾವೈಭವದ ಸಲುವಾಗಿ ಯುದ್ಧದ ಸನ್ನಿವೇಶಕ್ಕಿಂತ ಮೊದಲಿನ ಭಾಗ ಪ್ರದರ್ಶನಗೊಂಡಿತ್ತು. ಅಪರಾಹ್ನದ ಅನಂತರ ಹೊರಗಡೆಯಲ್ಲಿ ಯುದ್ಧ ಮುಂತಾದ ಸನ್ನಿವೇಶಗಳು ಪ್ರದರ್ಶನ ನಡೆಯಲಿತ್ತು.
ಸೆಟ್ ಗಳಿಗೆ ಹಾನಿ:
ಒಂದು ವೇಳೆ ಅರ್ಧಗಂಟೆ ಮೊದಲು ಈ ಪೆಂಡಲ್ ಕುಸಿದಿದ್ದರೆ ಇದರ ಕೆಳಗಡೆ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಾವಿರಾರು ಮಂದಿಗೆ ಪ್ರಾಣಪಾಯವಾಗುವ ಸಂಭವವಿತ್ತು. ಸದ್ಯ ಈ ಅವಘಡದಿಂದಾಗಿ ಪಂಚ ಮಹಾವೈಭವಕ್ಕಾಗಿ ಹಾಕಲಾದ ಅರಮನೆ ಮುಂತಾದ ಸೆಟ್ಗಳು ಭಾಗಷಃ ಹಾನಿಯಾಗಿದ್ದು ಮುಂದಿನ ಕಾರ್ಯಕ್ರಮಗಳಿಗೆ ಸ್ವಲ್ಪ ಅಡ್ಡಿಯಾಗಿದೆ. ಘಟನೆ ನಡೆದು ಸ್ವಲ್ಪ ಹೊತ್ತಿನಲ್ಲೇ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ಥಳಕ್ಕಾಗಮಿಸಿದರು. ಇದೀಗ ಪೆಂಡಲ್ನ ತೆರವು ಕಾರ್ಯ ಆರಂಭಗೊಂಡಿದೆ. ಫಟನೆಯಲ್ಲಿ ಇನ್ನು ಏನೆಲ್ಲ ಹಾನಿಗಳಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದೊಂದು ಪವಾಡವೆಂದ ಜನರು:
ಘಟನೆಯಲ್ಲಿ ಏನೂ ಅನಾಹುತವಾಗದಿರಲು ದೇವರ ದಯೆಯೇ ಕಾರಣ. ಒಟ್ಟಾರೆ ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿಯ ಪವಾಡ ಸದೃಶ ಕೃಪೆಯಿಂದ ಈ ರೀತಿ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದೆ ಎಂದು ಭಕ್ತಾಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.