ಹೆಬ್ರಿ: ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಢವಾಗುತ್ತಿದೆ. ಅರ್ಹರೆಲ್ಲರಿಗೂ ಯೋಜನೆಗಳ ಲಾಭ ತಲುಪಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಬಡವರಿಗೆ ಗ್ಯಾರಂಟಿ ಯೋಜನೆಯು ಶಕ್ತಿ ನೀಡಿದೆ. ಗ್ಯಾರಂಟಿ ಯೋಜನೆಗಳು ಮಾತ್ರ ಸರ್ಕಾರದ ಸಾಧನೆಯಾಗಬಾರದು, ಅಭಿವೃದ್ಧಿ ಕಾರ್ಯಗಳು ಕೂಡ ನಡೆಯಬೇಕು. ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಹೆಬ್ರಿ ತಾಲ್ಲೂಕು ಆಡಳಿತದ ವತಿಯಿಂದ ಸಮಾಜ ಮಂದಿರದಲ್ಲಿ ಗುರುವಾರ ನಡೆದ ಹೆಬ್ರಿ ಹೋಬಳಿ ಮಟ್ಟದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಗ್ಯಾರಂಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್ ಮಾತನಾಡಿ, ತಾಲ್ಲೂಕಿನಲ್ಲಿ ಅನ್ನಭಾಗ್ಯದ 9,604 ಫಲಾನುಭವಿಗಳು, ಉಚಿತ ವಿದ್ಯುತ್ನ 13,978 ಫಲಾನುಭವಿಗಳು, 6,228 ಗೃಹಲಕ್ಷ್ಮಿ ಫಲಾನುಭವಿಗಳು ಹಾಗೂ ಯುವನಿಧಿಯ 6 ಜನ ಫಲಾನುಭವಿಗಳಿದ್ದು, ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆಯ ಸವಲತ್ತು ತಲುಪಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಬ್ರಿ ತಾರಾನಾಥ ಬಂಗೇರ, ಮಡಾಮಕ್ಕಿಯ ಉದಯ ಕುಮಾರ್ ಶೆಟ್ಟಿ, ವರಂಗದ ಸಂತೋಷ್ ಆಮೀನ್, ಮುದ್ರಾಡಿಯ ವಸಂತಿ ಪೂಜಾರಿ, ಚಾರದ ದಿನೇಶ್ ಶೆಟ್ಟಿ, ಮೆಸ್ಕಾಂ ಅಧಿಕಾರಿ ನಾಗರಾಜ್ ಆಚಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಜಯಾ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಶಿಧರ್ ಸ್ವಾಗತಿಸಿದರು. ಉಪ ತಹಶೀಲ್ಧಾರ್ ರವಿಶಂಕರ್ ವಂದಿಸಿದರು.