ಬೆಂಗಳೂರು: ತುಳುನಾಡಿನ ಚಿರಪರಿಚಿತ ಮತ್ತು ಅತ್ಯಪೂರ್ವ ನಿರ್ದೇಶಕ-ನಟ ತೆಲಿಕೆದ ಬೊಳ್ಳಿ, ದೇವದಾಸ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ “ಪುರುಷೋತ್ತಮನ ಪ್ರಸಂಗ” ಚಿತ್ರ ಇಂದು ತೆರೆಕಾಣುತ್ತಿದೆ. ಅದಾಗಲೇ ತುಳು ನಾಟಕ ಮತ್ತು ಚಲನಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ದೇವದಾಸ್ ಕಾಪಿಕಾಡ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಅಣಿಯಾಗಿದ್ದಾರೆ.
ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಜಯ್ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ಸಾಯಿಕೃಷ್ಣ ಕುಡ್ಲ, ದೇವದಾಸ್ ಕಾಪಿಕಾಡ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದು ವಿಷ್ಣು ಪ್ರಸಾದ್ ಪಿ ಸಂಕಲನ ಮಾಡಿದ್ದಾರೆ. ಚಿತ್ರವನ್ನು ವಿ ರವಿಕುಮಾರ್ ನಿರ್ಮಿಸಿದ್ದಾರೆ.
“ನಾನು ಈ ಚಿತ್ರದಲ್ಲಿ ಪುರುಷೋತ್ತಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಸ್ಟೋರಿ. ಸಿಂಪಲ್ಲಾಗಿ ಎಲ್ಲರಿಗೂ ಇಷ್ಟವಾಗುವ ಕಥೆ. ಮಕ್ಕಳ ಹಾಗೂ ಪಾಲಕರ ವಿದೇಶ ಮೋಹ ಹಾಗೂ ನಮ್ಮ ದೇಶದ ಹಿರಿಮೆ ಸೇರಿದಂತೆ ಹಲವು ಅಂಶಗಳ ಜೊತೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಕಾಮಿಡಿ ಜೊತೆಗೆ ಯೋಚಿಸುವ ಅಂಶಗಳೂ ಇವೆ. ನನಗೆ ಮೊದಲಿನಿಂದಲೂ ರಂಗಭೂಮಿಯ ನಂಟು. ಟೊರಾಂಟೊ ಯೂನಿವರ್ಸಿಟಿಯಲ್ಲಿ ನಟನೆ ಕುರಿತು ಅಭ್ಯಾಸ ಮಾಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಜನ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಕಾತರವಿದೆ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಈ ಚಿತ್ರ ಮೋಸ ಮಾಡುವುದಿಲ್ಲ” ಎಂದು ಅಜಯ್ ಹೇಳಿದ್ದಾರೆ.












