ಉಡುಪಿ: ದತ್ತಪೀಠದ ವಿಚಾರದಲ್ಲಿ ನೂರಾರು ವರ್ಷಗಳಿಂದ ಇರುವ ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಸರ್ಕಾರ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಹಿಂದುಗಳ ಭಾವನೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ಸರ್ಕಾರ. ಹೀಗಾಗಿ ದತ್ತಪೀಠದ ವಿಷಯದಲ್ಲಿ ಯಾವುದೇ ವಿಳಂಬ ಮಾಡುವ ಪ್ರಶ್ನೆ ಇಲ್ಲ. ಕೋರ್ಟ್ ಆದೇಶದನ್ವಯ ಅನುಷ್ಟಾನಕ್ಕೆ ತರುತ್ತೇವೆ. ಅಲ್ಲಿರುವ ಉಳಿದ ಸಂಗತಿಗಳನ್ನು ಸೇರಿಸಿಕೊಂಡು ದತ್ತಪೀಠದ ಕುರಿತು ಒಳ್ಳೆಯ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.
ದಶಕಗಳ ಹೋರಾಟದ ಫಲವಾಗಿ ದತ್ತಪೀಠದ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಇದರ ಅನುಷ್ಠಾನ ಮಾಡುವ ಕುರಿತಂತೆ ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡಿ ಅದರ ಹಿನ್ನೆಲೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಬೇಕೆಂಬ ಕಾರಣಕ್ಕಾಗಿ ಕಾನೂನು ಸಚಿವರು, ಕಂದಾಯ ಸಚಿವರು ಹಾಗೂ ಮುಜರಾಯಿ ಇಲಾಖೆ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ಶೀಘ್ರವೇ ಈ ಬಗ್ಗೆ ಸುತ್ತೋಲೆ ಹೊರಡಿಸಲಿದೆ ಎಂದರು.