ಬೆಂಗಳೂರು: ಮಧ್ಯಾಹ್ನದ ಬಿಸಿಯೂಟದ ಬದಲು ಮಕ್ಕಳಿಗೆ ಆಹಾರ ಧಾನ್ಯ ಒದಗಿಸಲು ಡಿಸೆಂಬರ್ 5ರಂದೇ ಆದೇಶ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದು ಕೆಜಿ ಅಯೊಡೈಸ್ಡ್ ಉಪ್ಪು, ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನು ಐದು ತಿಂಗಳ ಲೆಕ್ಕಾಚಾರದಲ್ಲಿ (ಆಗಸ್ಟ್– 2020ರಿಂದ ಏಪ್ರಿಲ್–2021 ತನಕ ಅನ್ವಯವಾಗಲಿದೆ) ವಿತರಿಸಲಾಗುವುದು ಎಂದು ತಿಳಿಸಿದೆ.
ಕೋವಿಡ್ ಕಾರಣದಿಂದ ಆರು ತಿಂಗಳ ಕಾಲ ಮಕ್ಕಳು ಈ ಯೋಜನೆಯಿಂದ ವಂಚಿತರಾಗಿದ್ದು, ಅದನ್ನು ಸರಿದೂಗಿಸಲು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಉಪ್ಪು ಹಾಗೂ ಎಣ್ಣೆ ಬದಲು ತೊಗರಿ ಬೇಳೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಸಾಧ್ಯವಾಗುತ್ತದೆಯೆಂದು ಪರಿಶೀಲಿಸುವಂತೆ ಕೋರ್ಟ್ ನಿರ್ದೇಶ ನೀಡಿದೆ.